ನವದೆಹಲಿ: ಭಾರತದಲ್ಲಿ ಕರೊನಾ ವೈರಸ್ನಿಂದ ಮೃತಪಟ್ಟವರ ಸಂಖ್ಯೆ 68ಕ್ಕೆ ಏರಿದೆ. ಸದ್ಯ 2902 ಮಂದಿ ಸೋಂಕಿತರು ಇದ್ದಾರೆ. ಅದಲ್ಲದೆ ಬೇರೆ ಕೆಲವು ದೇಶಗಳಲ್ಲಿರುವ ಭಾರತೀಯರೂ ಸಹ ಕರೊನಾಕ್ಕೆ ಬಲಿಯಾಗಿದ್ದಾರೆ.
ಅಮೆರಿಕ, ಇಟಲಿ, ಯುಎಇ(ಸಂಯುಕ್ತ ಅರಬ್ ರಾಷ್ಟ್ರ) ಇರಾನ್ ಹಾಗೂ ಈಜಿಪ್ಟ್ನಿಂದ ಒಟ್ಟು 15 ಮಂದಿ ಭಾರತೀಯರು ಕರೊನಾ ವೈರಸ್ನಿಂದ ಸಾವನ್ನಪ್ಪಿದ್ದಾರೆ. ಇದರಲ್ಲಿ ಅಮೆರಿಕದಲ್ಲಿಯೇ ಹೆಚ್ಚು ಅಂದರೆ ಆರು ಮಂದಿ ಭಾರತೀಯರು ಮೃತಪಟ್ಟಿದ್ದಾರೆ. ಉಳಿದಂತೆ ಇಟಲಿಯಲ್ಲಿ ಐವರು, ಯುಎಇನಲ್ಲಿ ಇಬ್ಬರು, ಇರಾನ್ ಹಾಗೂ ಈಜಿಪ್ಟ್ನಿಂದ ತಲಾ ಒಬ್ಬರನ್ನು ಕರೊನಾ ಬಲಿಪಡೆದಿದೆ. ಇರಾನ್ನ ಕೋಮ್ನಗರದಲ್ಲಿ ಅತಿ ಹೆಚ್ಚು ಮಂದಿ ಭಾರತೀಯರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ.
ಭಾರತ ಇದುವರೆಗೆ ಚೀನಾ, ಜಪಾನ್, ಇರಾನ್ ಮತ್ತು ಇಟಲಿಯಲ್ಲಿ ಸಿಲುಕಿ, ಕರೊನಾ ಭಯದಲ್ಲಿದ್ದ 2500 ಜನರನ್ನು ವಾಪಸ್ ಕರೆದುಕೊಂಡು ಬಂದಿದೆ. ಕಳೆದ ವಾರ ಜಗತ್ತಿನ ವಿವಿಧ ದೇಶಗಳಲ್ಲಿರುವ ಭಾರತದ ರಾಯಭಾರಿಗಳ ಬಳಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದರು. ಆಯಾ ದೇಶಗಳಲ್ಲಿರುವ ಭಾರತೀಯರ ಸುರಕ್ಷತೆ ಬಗ್ಗೆ ಚರ್ಚಿಸಿದ್ದಾರೆ. (ಏಜೆನ್ಸೀಸ್)