ಬಾಳೆಹೊನ್ನೂರು: ಪಟ್ಟಣದ ವಿದ್ಯಾಗಣಪತಿ ಸೇವಾ ಸಮಿತಿಯಿಂದ 65ನೇ ವರ್ಷದ ವಿದ್ಯಾಗಣಪತಿ ಮಹೋತ್ಸವ ಸೆ.18ರಿಂದ ಅ.1ರವರೆಗೆ ಒಟ್ಟು 15 ದಿನ ವಿಜೃಂಭಣೆಯಿಂದ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಟಿ.ಆರ್.ಧರ್ಮಪ್ಪಗೌಡ ಕಲ್ಮಕ್ಕಿ ತಿಳಿಸಿದ್ದಾರೆ.
ಸೆ.18ರಂದು ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿದ್ಯಾಗಣಪತಿಯ ಪ್ರತಿಷ್ಠಾಪನೆ ನಡೆಯಲಿದೆ. ಪ್ರತಿನಿತ್ಯ ಮಧ್ಯಾಹ್ನ, ರಾತ್ರಿ ವಿದ್ಯಾಗಣಪತಿಗೆ ಮಹಾಪೂಜಾ ನೆರವೇರಲಿದೆ. ಪ್ರತಿನಿತ್ಯ ರಾತ್ರಿ8 ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸೆ.30ರಂದು ಬೆಳಗ್ಗೆ ಗಣಪತಿ ಸನ್ನಿಧಿಯಲ್ಲಿ ಗಣಹೋಮ ನಡೆಯಲಿದೆ. ಸಂಜೆ 7 ಗಂಟೆಗೆ ಗಣೇಶೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು, ಸಿಂಹನಗದ್ದೆ ಬಸ್ತಿಮಠದ ಶ್ರೀಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಮಂಗಳೂರು ಾದರ್ ಮುಲ್ಲರ್ ಆಸ್ಪತ್ರೆ ಸೀನಿಯರ್ ಫಿಜಿಶಿಯನ್ ಡಾ.ಬಿ.ಎಂ.ವೆಂಕಟೇಶ್ ಅವರಿಗೆ ಸನ್ಮಾನ ನಡೆಯಲಿದೆ.
ಅ.1ರಂದು ಮಧ್ಯಾಹ್ನ 15 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನ ಸಂತರ್ಪಣೆ ನಂತರ ವಿಸರ್ಜನಾ ಪೂಜೆ ನೆರವೇರಲಿದ್ದು, ಮಧ್ಯಾಹ್ನ 3 ಗಂಟೆ ಪಟ್ಟಣದಲ್ಲಿ ವಿದ್ಯಾಗಣಪತಿಯ ಉತ್ಸವ ನಡೆಯಲಿದೆ. ಉತ್ಸವದಲ್ಲಿ ಚಲಿಸುವ ಆರ್ಕೆಸ್ಟ್ರಾ, ಕೀಲುಕುದುರೆ, ಗೊಂಬೆ, ಕರಗ ನೃತ್ಯ, ಚಂಡೆ, ಹಲಗೆವಾದನ ಸೇರಿದಂತೆ ಹಲವು ಆಕರ್ಷಣೆಗಳು ಇರಲಿದೆ. ಜೇಸಿ ವೃತ್ತದ ಸಮೀಪ ವಿಶೇಷ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ನಂತರ ವಿದ್ಯಾಗಣಪತಿಯನ್ನು ಭದ್ರಾನದಿಯಲ್ಲಿ ಜಲಸ್ತಂಭನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.