ನ್ಯೂಸ್

ನೋಟಿಸ್ ವಾಪಸ್ಸಿಗೆ ವಕ್ಫ್, ಸರ್ಕಾರಕ್ಕೆ 15 ದಿನಗಳ ಗಡುವು: ಕಾರಜೋಳ ಎಚ್ಚರಿಕೆ

ಬೆಂಗಳೂರು: ವಿಜಯಪುರ ಜಿಲ್ಲೆಯ ದಲಿತ ರೈತರು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಈಗ ಇದ್ದಕ್ಕಿದ್ದಂತೆ ವಕ್ಫ್‌ಗೆ ಸೇರಿದ್ದೆಂದು ನೋಟಿಸ್ ನೀಡಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಕಳವಳ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ನೀಡಿದ ಅವರು, ಸರ್ಕಾರ ಮತ್ತು ವಕ್ಫ್ ಮಂಡಳಿಗೆ 15 ದಿನಗಳ ಗಡುವು ನೀಡುತ್ತೇವೆ. ರೈತರಿಗೆ ಕೊಟ್ಟ ನೋಟಿಸ್ ಹಿಂಪಡೆಯದಿದ್ದರೆ ರಾಜ್ಯಾದ್ಯಂತರ ರೈತರೊಡಗೂಡಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಜಮೀನು ಕಬಳಿಸುವ ಹುನ್ನಾರ

ದಲಿತರಿಗೆ ನೋಟಿಸ್ ಕೊಟ್ಟು ಜಮೀನು ಕಿತ್ತುಕೊಳ್ಳುವ ಪ್ರಯತ್ನವು ರಾಜ್ಯ ಸರ್ಕಾರದ ದುರಾಡಳಿತ ಎತ್ತಿ ತೋರಿಸುತ್ತದೆ. ಕೇಂದ್ರ ಸರ್ಕಾರ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮುನ್ನ ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಮಂಡಳಿ ಆಸ್ತಿ ಎಂದು ಹೇಳಿ, 15 ಸಾವಿರ ಎಕರೆ ಭೂಮಿ ಕಬಳಿಸುವ ಹುನ್ನಾರ ಹೂಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ನೋಟಿಸ್ ವಾಪಸ್ ಪಡೆಯುವುದಷ್ಟೇ ಅಲ್ಲ, ಪಹಣಿ ತಿದ್ದುಪಡಿ ಮಾಡಿ ಜಮೀನಿನ ಮಾಲೀಕತ್ವ ಮತ್ತೆ ರೈತರ ಹೆಸರಿಗೆ ಆಗಬೇಕು. ಯಾವುದೇ ಕಾರಣಕ್ಕೆ ರಾಜ್ಯ ಸರ್ಕಾರ ಉದಾಸೀನ ಮಾಡಬಾರದು ಎಂದು ಗೋವಿಂದ ಕಾರಜೋಳ ಒತ್ತಾಯಿಸಿದರು.