ನವದೆಹಲಿ: ಕರೊನಾ ವೈರಸ್ ವಿಶ್ವದೆಲ್ಲೆಡೆ ತಲ್ಲಣ ಸೃಷ್ಟಿಸಿದೆ ಎನ್ನಲಾಗುತ್ತಿದ್ದರೂ, ಈ ಮಹಾಮಾರಿಯ ಸೋಂಕು ಒಂದಷ್ಟು ದೇಶಗಳನ್ನು ಇದುವರೆಗೆ ಸೋಕಿಲ್ಲ ಎನ್ನುವುದು ಗೊತ್ತೆ?
ಹೌದು. ಮಹಾಮಾರಿ ಈಗಾಗಲೇ ಜಗತ್ತಿನಾದ್ಯಂತ 1,34,720 ಮಂದಿಯನ್ನು ಇಲ್ಲಿಯವರೆಗೆ ಬಲಿ ಪಡೆದಿದ್ದರೂ ವಿಶ್ವದ 195 ದೇಶಗಳ ಪೈಕಿ 15 ದೇಶಗಳಿಗೆ ಇದಿನ್ನೂ ಕಾಲಿಟ್ಟಲ್ಲ. ಆದ್ದರಿಂದ ಈ ಸೋಂಕಿನ ಅರಿವೇ ಇಲ್ಲಿಯ ಜನತೆಗಿಲ್ಲ.
ಮೆರಿಲ್ಯಾಂಡ್‌ನಲ್ಲಿರುವ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸಿಸ್ಟಮ್ಸ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ (ಸಿಎಸ್‌ಎಸ್‌ಇ) ನಡೆಸಿರುವ ಅಧ್ಯಯನದ ಪ್ರಕಾರ, ಏಷ್ಯಾ, ಆಫ್ರಿಕಾದಲ್ಲಿವೆ ಮತ್ತು ಓಷಿಯಾನಿಯಾದ 15 ದೇಶಗಳು ಕರೊನಾ ಮುಕ್ತವಾಗಿವೆ. ಅದೇ ರೀತಿ ಅಂಟಾರ್ಟಿಕಾದಲ್ಲಿ ಕೂಡ ಜನರು ಒಂದೇ ಪ್ರದೇಶದಲ್ಲಿ ನಿಲ್ಲದ ಕಾರಣ ಅಲ್ಲಿ ಕೂಡ ವೈರಸ್ ಬಾಧಿಸಿಲ್ಲ ಎಂದು ಈ ಅಧ್ಯಯನದಿಂದ ತಿಳಿದುಬಂದಿದೆ.
ಏಷ್ಯಾದ ಮಟ್ಟಿಗೆ ಹೇಳುವುದಾದರೆ, ಉತ್ತರ ಕೊರಿಯಾ, ತಜಿಕಿಸ್ತಾನ್ ಮತ್ತು ಟರ್ಕ್‌ಮೆನಿಸ್ತಾನ್‌ನಲ್ಲಿ ಇದುವರೆಗೆ ಒಂದೇ ಒಂದು ಸೋಂಕು ಪತ್ತೆಯಾಗಿರುವುದು ವರದಿಯಾಗಿಲ್ಲ. ಇವುಗಳ ಪೈಕಿ ಉತ್ತರ ಕೊರಿಯಾದ ವಿಷಯದಲ್ಲಿ ಸತ್ಯಾಸತ್ಯತೆ ತಿಳಿಯುವುದು ಬಲು ಕಷ್ಟವೇ ಎಂದು ಅಂದಾಜಿಸಲಾಗಿದೆ. ನಿರಂಕುಶಾಧಿಕಾರಿ ಕಿಮ್ ಜೊಂಗ್-ಉನ್ ಆಳ್ವಿಕೆಯಲ್ಲಿರುವ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ ನಿಜವಾಗಿಯೂ ಕರೊನಾ ವೈರಸ್ ಮುಕ್ತಗೊಂಡಿದೆ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ. ಏಕೆಂದರೆ ಪ್ರಪಂಚದ ಇತರ ಭಾಗಗಳಿಂದ ತನ್ನನ್ನು ತಾನೇ ಬೇರ್ಪಡಿಸಿಕೊಳ್ಳುವಲ್ಲಿ ಕುಖ್ಯಾತಿ ಪಡೆದಿರುವ ಉತ್ತರ ಕೊರಿಯಾ ತನ್ನ ದೇಶದ ಒಳಗಿನ ಮಾಹಿತಿಗಳನ್ನು ಮಾತ್ರ ಎಂದಿಗೂ ಬಿಟ್ಟುಕೊಡದುದಕ್ಕೇ ಪ್ರಸಿದ್ಧಿ ಪಡೆದಿದೆ.
ಅಷ್ಟೇ ಅಲ್ಲದೇ ಉತ್ತರ ಕೊರಿಯಾವು ಕರೊನಾ ವೈರಸ್ ತವರು ಚೀನಾ ಸೇರಿದಂತೆ ಅಧಿಕ ವೈರಸ್ ಪತ್ತೆಯಾಗಿರುವ ರಷ್ಯಾ ಮತ್ತು ದಕ್ಷಿಣದಲ್ಲಿ ದಕ್ಷಿಣ ಕೊರಿಯಾ ಗಡಿಯಲ್ಲಿದೆ. ದೇಶವು ಸರ್ಕಾರಿ ಪ್ರಾಯೋಜಿತ ಉಚಿತ ಆರೋಗ್ಯ ಸೇವೆಯನ್ನು ಹೊಂದಿದ್ದರೂ, ಕೋವಿಡ್ -19 ಅನ್ನು ಪರೀಕ್ಷಿಸುವ ವಿಧಾನವನ್ನು ಅದು ಹೊಂದಿರಲಿಲ್ಲ. ಜನವರಿಯಲ್ಲಿ ಚೀನಾದಿಂದ ಪರೀಕ್ಷಾ ಕಿಟ್‌ಗಳನ್ನು ಪಡೆದ ನಂತರ ಗಪ್‌ಚುಪ್ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ದಕ್ಷಿಣ ಕೊರಿಯಾ ಮಾತ್ರ 30 ದಿನಗಳ ಲಾಕ್‌ಡೌನ್ ಘೋಷಿಸಿದೆ.
ಮಧ್ಯ ಏಷ್ಯಾದ ತಜಿಕಿಸ್ತಾನ್ ದೇಶವು, ಅಫ್ಘಾನಿಸ್ತಾನ, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್ ಮತ್ತು ಚೀನಾದ ಗಡಿಯಲ್ಲಿರುವ ಪರ್ವತಮಯ, ಭೂಕುಸಿತ ದೇಶ. ಇದರ ಭೂಪ್ರದೇಶವು ಸುಮಾರು 90 ಪ್ರತಿಶತದಷ್ಟು ಪರ್ವತ ಪ್ರದೇಶವಾಗಿದೆ ಮಾರ್ಚ್ ಆರಂಭದಲ್ಲಿಯೇ ಕರೊನಾ ಪೀಡಿತ 35 ದೇಶವಾಸಿಗಳ ಪ್ರವೇಶವನ್ನು ಇದು ನಿಷೇಧಿಸಿತ್ತು. ಆದರೆ ತಕ್ಷಣವೇ ಅದರ ನಿರ್ಬಂಧಗಳನ್ನು ಹಿಂತೆಗೆದುಕೊಂಡೂ ತುಂಬಾ ಜಾಗರೂಕತೆಯಿಂದ ಹೆಜ್ಜೆ ಇಟ್ಟಿತ್ತು.
ತುರ್ಕಮೆನಿಸ್ತಾನ್ ಏಷ್ಯಾದ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಒಂದಾಗಿದೆ, ಕೇವಲ 5.6 ದಶಲಕ್ಷ ಜನಸಂಖ್ಯೆ ಇದೆ. ಇದು ಸೋಂಕಿನ ಕುರಿತಂತೆ ಆರಂಭದಿಂದಲೇ ಅತ್ಯಂತ ಮಹತ್ವದ ನಿರ್ಧಾರಗಳನ್ನು ತಳೆದಿತ್ತು.
ಉಳಿದಂತೆ ಓಷಿಯಾನಾದಿಂದ ಬಹಳ ದೂರದಲ್ಲಿ ಇರುವ ಮಲನೇಷಿಯಾ, ಮೈಕ್ರೋನೇಷಿಯಾ ಮತ್ತು ಪಾಲಿನೇಷ್ಯಾಗಳು ಕೂಡ ಕರೊನಾಮುಕ್ತಗೊಂಡಿವೆ.
ಆಫ್ರಿಕಾ ಲೆಸೊಥೊ ಮತ್ತು ಕೊಮೊರೊಸ್ ದೇಶಗಳು ತನ್ನ ಭೌಗೋಳಿಕ ಕಾರಣಗಳಿಂದ ಸೋಂಕನ್ನು ದೇಶದೊಳಕ್ಕೆ ಪ್ರವೇಶಿಸದಂತೆ ತಡೆಯಲು ಸಾಧ್ಯವಾಗಿದೆ. ಇದರ ಸುತ್ತಲೂ ಅತಿದೊಡ್ಡ ದ್ವೀಪ ಸುತ್ತುವರಿದಿದೆ. ಇದರ ಹೊರತಾಗಿಯೂ ಸೋಂಕಿತರು ಇರುವ ಶಂಕೆಯಿಂದಾಗಿ ವಿಶ್ವ ಆರೋಗ್ಯ ಸಂಸ್ಥೆಯು 250 ಶಂಕಿತರನ್ನು ಪರೀಕ್ಷೆಗೆ ಒಳಪಡಿಸಿತ್ತು. ಆದರೆ ಯಾರಲ್ಲಿಯೂ ಸೋಂಕು ಪತ್ತೆಯಾಗಿಲ್ಲ.
ಇನ್ನು, ಓಷಿಯಾನಾದ ದೇಶಗಳಾದ ಕಿರಿಬಾಟಿ, ತುವಾಲು, ಟೋಂಗಾ, ಸಮೋವಾ, ಮಾರ್ಷಲ್ ದ್ವೀಪಗಳು, ಸೊಲೊಮನ್ ದ್ವೀಪಗಳು, ನೌರು, ಪಲಾವ್, ವನವಾಟು ಮತ್ತು ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾಗಳು ಸೋಂಕಿನಿಂದ ಸಂಪೂರ್ಣ ದೂರವಿದೆ. ಕರೊನಾ ಸೋಂಕಿನ ವಿಷಯ ತಿಳಿಯುತ್ತಿದ್ದಂತೆಯೇ ತುರ್ತು ಪರಿಸ್ಥಿತಿ ಘೋಷಿಸಿದ್ದರಿಂದ ಇವು ತಮ್ಮನ್ನು ತಾವು ರಕ್ಷಿಸಿಕೊಂಡಿವೆ.
ಏಜೆನ್ಸೀಸ್