ಹರೀಶ್ ಬೇಲೂರು ಬೆಂಗಳೂರು
ರೋಗಿಗಳ ಜೀವದ ಜತೆ ಚೆಲ್ಲಾಟವಾಡುತ್ತಿದ್ದ 1,436 ನಕಲಿ ವೈದ್ಯರು ಸಿಕ್ಕಿಬಿದ್ದಿದ್ದಾರೆ. ಅಲೋಪಥಿ, ನ್ಯಾಚುರೋಪಥಿ, ಆಯುರ್ವೆದ ಹಾಗೂ ಹೋಮಿಯೋಪಥಿ ಹೆಸರಿನಲ್ಲಿ ದಂಧೆ ನಡೆಸುತ್ತಿರುವವರ ಪಟ್ಟಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದು, ಬೀದರ್ನಲ್ಲಿ ಅತಿ ಹೆಚ್ಚು 423 ನಕಲಿ ವೈದ್ಯರು ಸಿಕ್ಕಿಬಿದ್ದಿದ್ದಾರೆ. ಕೆಲವರ ಮೇಲೆ ಭ್ರೂಣ ಹತ್ಯೆ ದಂಧೆ ಆರೋಪವೂ ಕೇಳಿಬಂದಿದೆ.
ವರ್ಷದಿಂದ ವರ್ಷಕ್ಕೆ ಖಾಸಗಿ ಕ್ಲಿನಿಕ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. 20-30 ವರ್ಷಗಳ ಹಿಂದೆಯೇ ಕೆಲ ನಕಲಿ ವೈದ್ಯರು ಕ್ಲಿನಿಕ್ ತೆರೆದು ಕೋಟ್ಯಂತರ ರೂ. ಮಾಡಿಕೊಂಡಿದ್ದಾರೆ. ಇಂತಹ ಕ್ಲಿನಿಕ್ಗಳಲ್ಲಿ ಚಿಕಿತ್ಸೆ ಪಡೆದಿರುವ ಸಾಕಷ್ಟು ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಸಾವಿರಾರು ನಕಲಿ ವೈದ್ಯರು ಬೀಡುಬಿಟ್ಟರೂ ಇಲಾಖೆ ಪರಿಣಾಮಕಾರಿಯಾಗಿ ಕ್ರಮಕೈಗೊಳ್ಳುತ್ತಿಲ್ಲ. ಮೇ;ಧಿಕಾರಿಗಳಿಗೆ ಪ್ರತಿ ತಿಂಗಳು ನಕಲಿ ವೈದ್ಯರಿಂದ ಇಂತಿಷ್ಟು ಮಾಮೂಲಿ ಹೋಗುತ್ತಿರುವುದರಿಂದ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಜಿಲ್ಲಾ ವ್ಯಾಪ್ತಿಯಲ್ಲಿ ನಕಲಿ ವೈದ್ಯರು, ಇಲಾಖೆ ಉನ್ನತ ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದು, ದಾಳಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಆಯುಷ್ ಇಲಾಖೆ ಉನ್ನತ ಅಧಿಕಾರಿಗಳು ಬಹಳ ವರ್ಷಗಳಿಂದ ಒಂದೇ ಹುದ್ದೆಯಲ್ಲಿದ್ದಾರೆ. ಕೆಲ ಅಧಿಕಾರಿಗಳಂತೂ ಪ್ರಭಾರ ಮೇಲೆ ನೇಮಕಗೊಂಡು ವ್ಯವಹಾರಕ್ಕೆ ಅಡಚಣೆ ಯಾಗದಂತೆ ನಿಗಾವಹಿಸಿರುವ ಆರೋಪಗಳಿವೆ.
ನೋಂದಣಿ ಸಂಖ್ಯೆ ದುರ್ಬಳಕೆ: ಕೆಎಯುಪಿಯಲ್ಲಿ ಒಮ್ಮೆ ನೋಂದಣಿಯಾದ ವೈದ್ಯರು ನಿಧನರಾದರೆ, ಹೊರ ರಾಜ್ಯಕ್ಕೆ ಅಥವಾ ವಿದೇಶಗಳಿಗೆ ತೆರಳಿದರೆ ಅವರ ನೋಂದಣಿ ರದ್ದಾಗುತ್ತದೆ. ಆ ನೋಂದಣಿಯನ್ನು ಬೇರೆಯವರಿಗೆ ನೀಡಲು ಅವಕಾಶವಿಲ್ಲ. ಆದರೆ, ರಿಜಿಸ್ಟ್ರಾರ್ಗಳು ಈ ಸಂಖ್ಯೆಯನ್ನು ಬಳಸಿಕೊಂಡು ಕೆಲ ನಕಲಿ ವೈದ್ಯರಿಗೆ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ. ಇದಕ್ಕೆ ನಾಲ್ಕೈದು ಲಕ್ಷ ರೂ.ಲಂಚ ಪಡೆದಿದ್ದಾರೆ ಎಂಬ ಆರೋಪಗಳು ಇವೆ. ಪತ್ರದಲ್ಲಿ ಹೆಸರು ನಮೂದಿಸಿ ಮತ್ತು ಭಾವಚಿತ್ರ ಅಂಟಿಸಿಕೊಂಡು ದಂಧೆಗೆ ಇಳಿಯುವ ನಕಲಿ ವೈದ್ಯರು, ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ.
ನಕಲಿ ವೈದ್ಯರಿಗೆ ಶಿಕ್ಷೆಯೇನು?: ಮೊದಲ ಬಾರಿಗೆ ಸಿಕ್ಕಿಬೀಳುವ ನಕಲಿ ವೈದ್ಯರಿಗೆ 25 ಸಾವಿರ ರೂ., 2ನೇ ಬಾರಿ ಸಿಕ್ಕಿ ಬಿದ್ದರೆ 2.5ಲಕ್ಷ ರೂ. ಮತ್ತು 1 ವರ್ಷ ಜೈಲು ಶಿಕ್ಷೆ. 3ನೇ ಬಾರಿ ಸಿಕ್ಕಿ ಬಿದ್ದರೆ 5 ಲಕ್ಷ ರೂ. ದಂಡ ಮತ್ತು 3 ವರ್ಷ ಜೈಲು ಶಿಕ್ಷೆ ಇದೆ.
ಸಿಕ್ಕಿಬಿದ್ದಿರುವ ನಕಲಿ ವೈದ್ಯರ ವಿವರ: ಬೀದರ್ 423, ಕೋಲಾರ 179, ಬೆಳಗಾವಿ 170, ಕಲಬುರಗಿ 82, ಶಿವಮೊಗ್ಗ 74, ಧಾರವಾಡ 70, ಬೆಂಗಳೂರು 67, ಚಾಮರಾಜನಗರ 51, ಕೊಪ್ಪಳ 33, ಬಳ್ಳಾರಿ 33, ದಕ್ಷಿಣ ಕನ್ನಡ 26, ಹಾಸನ 22, ದಾವಣಗೆರೆ 21, ಹಾವೇರಿ 19, ಮಂಡ್ಯ 17, ಉತ್ತರ ಕನ್ನಡ 15, ತುಮಕೂರು 12, ಚಿಕ್ಕಮಗಳೂರು 11, ವಿಜಯಪುರ 11, ಯಾದಗಿರಿ 11, ರಾಯಚೂರು 11, ಗದಗ 11, ಬೆಂ. ಗ್ರಾಮಾಂತರ 3, ಚಿತ್ರದುರ್ಗ 2, ವಿಜಯನಗರ 2, ಮೈಸೂರು 2,ಉಡುಪಿ 2, ಕೊಡಗು 1, ಬಾಗಲಕೋಟೆ 1.
ಕ್ಲಿನಿಕ್ ಎದುರು ಕಪು್ಪ ಪಟ್ಟಿ: ನಕಲಿ ವೈದ್ಯರನ್ನು ನಿಯಂತ್ರಣ ಮಾಡುವ ಸಲುವಾಗಿ ಅವರ ಕ್ಲಿನಿಕ್ಗಳ ಎದುರು ನಕಲಿ ಎಂದು ದೊಡ್ಡದಾಗಿ ಕಪು್ಪ ಬಣ್ಣದ ಫಲಕಗಳನ್ನು ಅಳವಡಿಸಲು ಆರೋಗ್ಯ ಇಲಾಖೆ ತೀರ್ವನಿಸಿದೆ. ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿರುವ ಸಚಿವ ದಿನೇಶ್ ಗುಂಡೂರಾವ್ ಅವರು ಕ್ಲಿನಿಕ್ಗಳಿರುವಲ್ಲಿ ಇವು ನಕಲಿ ಕ್ಲಿನಿಕ್ ಎಂದು ಕಪು್ಪಬಣ್ಣದಲ್ಲಿ ಬರೆಸುವಂತೆ ಸೂಚಿಸಿದ್ದಾರೆ. ಮೊಕದ್ದಮೆ ದಾಖಲಿಸುವುದೂ ಸೇರಿದಂತೆ ಹಲವು ಕ್ರಮ ಕೈಗೊಂಡರೂ ನಕಲಿ ವೈದ್ಯರ ಕಾಟ ತಪ್ಪಿಸಲು ಸಾಧ್ಯವಾಗಿಲ್ಲ. ಆದ್ದರಿಂದಲೇ ಈ ರೀತಿಯ ಫಲಕಗಳನ್ನು ಅಳವಡಿಸುವ ಮೂಲಕ ಹೊಸ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.