ನ್ಯೂಸ್

ದೇಶಾದ್ಯಂತ ಒಂದೇ ದಿನ ಐದು ಲಕ್ಷ ಜನರ ಪರೀಕ್ಷೆ, 1,409 ಜನರಲ್ಲಿ ಹೊಸದಾಗಿ ಕರೊನಾ ಸೋಂಕು ಪತ್ತೆ

ನವದೆಹಲಿ: ಜಾಗತಿಕವಾಗಿ ಕರೊನಾ ಸೋಂಕಿತರ ಸಂಖ್ಯೆ 26,44,628 ಕ್ಕೆ ಏರಿಕೆಯಾಗಿದ್ದು, 1,84,268 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಂತೆಯೇ, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 1,409 ಸೋಂಕಿತರು ಹೆಚ್ಚಾಗಿದ್ದು, ಒಟ್ಟು ಸಂಖ್ಯೆ 21,393ಕ್ಕೆ ತಲುಪಿದೆ. ಕೋವಿಡ್​ನಿಂದಾಗಿ 41 ಸಾವುಗಳು ವರದಿಯಾಗಿದ್ದು, ಈವರೆಗೆ 681 ಜನರು ಮೃತಪಟ್ಟಿದ್ದಾರೆ.

12 ಜಿಲ್ಲೆಗಳಲ್ಲಿ ಕಳೆದ 28 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ. ಅದರೊಂದಿಗೆ 14 ದಿನಗಳಲ್ಲಿ ಹೊಸ ಪ್ರಕರಣಗಳು ದಾಖಲಾಗದ ಜಿಲ್ಲೆಗಳ ಸಂಖ್ಯೆ 78ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕಳೆದ ತಿಂಗಳಿಗೆ ಹೋಲಿಸಿದಲ್ಲಿ ಕೋವಿಡ್​ ಚಿಕಿತ್ಸೆಗೆ ಮೀಸಲಾದ ಆಸ್ಪತ್ರೆಗಳ ಸಂಖ್ಯೆಯಲ್ಲಿ ಮೂರುವರೆ ಪಟ್ಟು ಹೆಚ್ಚಳವಾಗಿದೆ. ಐಸೋಲೇಷನ್​ ವಾರ್ಡ್​ಗಳ ಸಂಖ್ಯೆಯಲ್ಲಿ 3.6 ಪಟ್ಟು ಹೆಚ್ಚಳವಾಗಿದೆ.

ಕಳೆದ ಮಾರ್ಚ್​ 22ರಂದು ದೇಶಾದ್ಯಂತ 14,915 ಮಾದರಿಗಳನ್ನು ಪರೀಕ್ಷೆ ಮಾಡಲಾಗಿತ್ತು. ಆದರೆ, ಏಪ್ರಿಲ್​ 22 ರಂದು ಇಡೀ ದೇಶದಲ್ಲಿ 5 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿತ್ತು. ಅಂದರೆ, ಇದರ ಪ್ರಮಾಣದಲ್ಲಿ 33 ಪಟ್ಟು ಹೆಚ್ಚಳವಾಗಿದೆ.

ಲಾಕ್​ಡೌನ್​ ನಂತರದಲ್ಲಿ ಶಂಕಿತರನ್ನು ಪರೀಕ್ಷೆಗೊಳಪಡಿಸುವ ಪ್ರಮಾಣವು 24 ಪಟ್ಟು ಹೆಚ್ಚಾಗಿದ್ದರೆ, ಸೋಂಕಿತರ ಸಂಖ್ಯೆಯಲ್ಲಿ 16 ಪಟ್ಟು ಏರಿಕೆಯಾಗಿದೆ. ಕೋವಿಡ್​ ಪೀಡಿತರ ಸಂಖ್ಯೆಯನ್ನು ಗಮನಿಸಿದಾಗ ಬೆಳವಣಿಗೆ ಪ್ರಮಾಣವು ಮೇಲ್ಮುಖವಾಗಿ ವೃದ್ಧಿಯಾಗಿಲ್ಲ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ 5,652 ಕೇಸ್​ಗಳೊಂದಿಗೆ ಪ್ರಥಮ ಸ್ಥಾನದಲ್ಲಿದೆ. 2,407 ಪ್ರಕರಣಗಳೋಂದಿಗೆ ಗುಜರಾತ್​​ ದ್ವಿತೀಯ ಸ್ಥಾನದಲ್ಲಿ ದೆಹಲಿಯಲ್ಲಿ 2,248 ಪ್ರಕರಣಗಳು ಈವರೆಗೆ ವರದಿಯಾಗಿವೆ. ಲಾಕ್​ಡೌನ್​ ಅವಧಿಯನ್ನು ನಾವು ಭವಿಷ್ಯಕ್ಕಾಗಿ ಸಜ್ಜುಗೊಳ್ಳಲು ಉಪಯೋಗಿಸುತ್ತಿದ್ದೇವೆ ಅವರು ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ 1,890, ತಮಿಳುನಾಡಿನಲ್ಲಿ 1,629, ಮಧ್ಯಪ್ರದೇಶದಲ್ಲಿ 1,592, ಉತ್ತರಪ್ರದೇಶದಲ್ಲಿ 1,449 ಸೋಂಕಿತರಿದ್ದಾರೆ. ಕರ್ನಾಟಕ 445 ಪ್ರಕರಣಗಳೊಂದಿಗೆ 12ನೇ ಸ್ಥಾನದಲ್ಲಿದೆ.