ನ್ಯೂಸ್

ಕ್ಲಾಸ್ ತಪ್ಪಿಸಲು ಇಮೇಲ್ ಮೂಲಕ ಶಾಲೆಗೆ ಬಾಂಬ್ ಬೆದರಿಕೆ: 14 ವರ್ಷದ ಬಾಲಕನ ಬಂಧನ

ನವದೆಹಲಿ: ತರಗತಿಗೆ ಹೋಗುವುದರಿಂದ ತಪ್ಪಿಸಿಕೊಳ್ಳಲು ತನ್ನ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ 14 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಮಧ್ಯರಾತ್ರಿ 12.30ರ ಸುಮಾರಿಗೆ ಬಾಂಬ್‌ ಬೆದರಿಕೆ ಇಮೇಲ್‌ ಬಂದಿದ್ದರಿಂದ ಖಾಸಗಿ ಶಾಲೆಯಲ್ಲಿ ಆತಂಕ ಮನೆ ಮಾಡಿತ್ತು.

ಕೂಡಲೇ ಪೊಲೀಸರನ್ನು ಕರೆಸಿ ಬಾಂಬ್ ಮತ್ತು ಶ್ವಾನ ದಳದಿಂದ ತಪಾಸಣೆ ನಡೆಸಲಾಯಿತು. ದಕ್ಷಿಣ ದೆಹಲಿಯ ಇನ್ನೂ ಎರಡು ಖಾಸಗಿ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಇಮೇಲ್ ಸಂದೇಶ ಕಳುಹಿಸಲಾಗಿತ್ತು. ಸಂದೇಶ ಕಳುಹಿಸಿರುವವರು ಪಾಕಿಸ್ತಾನಿ ಜನರಲ್ ಎಂದು ಕೂಡ ಎಂದು ಹೇಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕನನ್ನು ಶನಿವಾರ ಬಂಧಿಸಲಾಗಿದೆ. ಆತ ಸಂಬಂಧಿಕರ ಇಮೇಲ್ ಖಾತೆಯ ಮೂಲಕ ಶಾಲಾ ಆಡಳಿತಕ್ಕೆ ಮೇಲ್ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಇತರ ಎರಡು ಶಾಲೆಗಳಲ್ಲಿಯೂ ತಪಾಸಣೆ ನಡೆಸಲಾಯಿತು. ಆದರೆ ಮೂರರಲ್ಲಿ ಎಲ್ಲಿಯೂ ಅನುಮಾನಾಸ್ಪದವಾಗಿ ವಸ್ತುಗಳು ಕಂಡು ಬರಲಿಲ್ಲ. ವಿಚಾರಣೆಯ ಸಮಯದಲ್ಲಿ, ಮರುದಿನ ತನ್ನ ಶಾಲೆಗೆ ಹೋಗಲು ಇಷ್ಟಪಡದ ಹುಡುಗನು ಸಂಬಂಧಿಕರ ಇಮೇಲ್ ಐಡಿಯನ್ನು ಬಳಸಿಕೊಂಡು ಶಾಲೆಯ ಆಡಳಿತಕ್ಕೆ ಬಾಂಬ್ ಬೆದರಿಕೆಯನ್ನು ಕಳುಹಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಲಕನನ್ನು ಜುವೆನೈಲ್ ಜಸ್ಟೀಸ್ ಬೋರ್ಡ್ (ಜೆಜೆಬಿ) ಮುಂದೆ ಹಾಜರುಪಡಿಸಲಾಯಿತು. ನಂತರ ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.