ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಕುರಿತು ಸಿದ್ದಲಿಂಗರೆಡ್ಡಿ ಪೂರ್ವ ಸಿದ್ದತಾ ಸಭೆ ನಡೆಸಿದರು. ಅನಿಲ್‌ಕುಮಾರ್ ಭೂಮರಡ್ಡಿ, ಸಿ.ಆರ್.ಪರಮೇಶ್ವರಪ್ಪ, ಸುಜಾತಾ, ಲೋಕೇಶ್ ಮುಂತಾದವರಿದ್ದರು. 
ನ್ಯೂಸ್

14ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2

ಅರವಿಂದ ಅಕ್ಲಾಪುರ

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಒಟ್ಟು 10 ಪರೀಕ್ಷಾ ಕೇಂದ್ರಗಳಲ್ಲಿ ಜೂ.14ರಿಂದ 22ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ನಡೆಯಲಿದ್ದು, 2,511 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ಕೇಂದ್ರಕ್ಕೆ 10 ಜನ ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ತಿಳಿಸಿದರು.

ಮಂಗಳವಾರ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 7 ಮಾರ್ಗಗಳಿಗೆ ಏಳು ಮಾರ್ಗಾಧಿಕಾರಿಗಳು, ಅನ್ಯ ಇಲಾಖಾ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಜಿಲ್ಲಾಧಿಕಾರಿ ಆದೇಶದಂತೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದರು.
ಪರೀಕ್ಷೆ ದಿನಗಳಂದು ನಿಷೇಧಾಜ್ಞೆ ವ್ಯಾಪ್ತಿಯ ಜೆರಾಕ್ಸ್ ಅಂಗಡಿಗಳು ಕಾರ್ಯ ನಿರ್ವಹಿಸುವಂತಿಲ್ಲ. ಪರೀಕ್ಷಾರ್ಥಿಗಳು ಕೇಂದ್ರದೊಳಕ್ಕೆ ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡೊಯ್ಯವುಂತಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಪೊಲೀಸ್ ಬಂದೋಬಸ್ತ್, ಆರೋಗ್ಯ ಸಹಾಯಕರನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕಡ್ಡಾಯ. ಅವು ಪರೀಕ್ಷಾ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು. ಜಿಪಂ ಸಿಇಒ ಕಚೇರಿಯಿಂದ ಈ ಸಿಸಿ ಕ್ಯಾಮರಾಗಳ ಮೇಲೆ ನಿಗಾ ಇರಿಸಲಾಗುವುದು ಎಂದು ತಿಳಿಸಿದರು.
ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ವಿವರಿಸಿದರು.
ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ, ಜಿಪಂ ಉಪ ಕಾರ್ಯದರ್ಶಿ ಸುಜಾತಾ, ಜಿಲ್ಲಾ ಖಜಾನಾಧಿಕಾರಿ ಸಾವಿತ್ರಿ, ಡಯಟ್ ಪ್ರಾಚಾರ್ಯ ಬಸವರಾಜ್, ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳು, ಬಿಇಒಗಳು ಸಭೆಯಲ್ಲಿದ್ದರು.
ಎಲ್ಲೆಲ್ಲಿ ಪರೀಕ್ಷಾ ಕೇಂದ್ರಗಳು?
ಭದ್ರಾವತಿ-2
ಹೊಸನಗರ -1
ಸಾಗರ -1
ಶಿಕಾರಿಪುರ-1
ಶಿವಮೊಗ್ಗ -3
ಸೊರಬ -1
ತೀರ್ಥಹಳ್ಳಿ -1
ಪರೀಕ್ಷಾರ್ಥಿಗಳ ವಿವರ
ಪುನರಾವರ್ತಿತ-2,091
ಖಾಸಗಿ ಪುನರಾವರ್ತಿತ-171
ಫಲಿತಾಂಶ ಸುಧಾರಣೆಗೆ- 249
ಒಟ್ಟು-2,511
ವಿಷಯವಾರು ವಿವರ
ಪ್ರಥಮ ಭಾಷೆ-1,215 ವಿದ್ಯಾರ್ಥಿಗಳು
ದ್ವಿತೀಯ ಭಾಷೆ-1,549
ತೃತೀಯ ಭಾಷೆ-1,409
ಗಣಿತ-1,785
ವಿಜ್ಞಾನ-2,035
ಸಮಾಜ ವಿಜ್ಞಾನ-1,435