ನ್ಯೂಸ್

ರಾಷ್ಟ್ರಪತಿ ಅಂಗಳಕ್ಕೆ?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ಹಂಚಿಕೆಯಾದ 14 ನಿವೇಶನ ವಿಚಾರವಾಗಿ ಕಾನೂನು ಹೋರಾಟ ನಡೆಸುವ ಉದ್ದೇಶದಿಂದ ಅಭಿಯೋಜನೆಗೆ ಅವಕಾಶ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ರಾಜ್ಯಪಾಲರಿಗೆ ಸಲ್ಲಿಸಿರುವ ಕೋರಿಕೆಗೆ ಈಗ ರಾಜ್ಯಪಾಲರು ತಮ್ಮ ಅಭಿಪ್ರಾಯ ತಿಳಿಸಬೇಕು.

ಈ ಪ್ರಕರಣದಲ್ಲಿ ತಮ್ಮ ನಿರ್ಧಾರ ಪ್ರಕಟಿಸುವ ಮುನ್ನ ರಾಜ್ಯಪಾಲರು ರಾಷ್ಟ್ರಪತಿ ಭವನದ ಗಮನಕ್ಕೆ ತರುವರು. ಸಂಪ್ರದಾಯದ ಪ್ರಕಾರ ರಾಷ್ಟ್ರಪತಿ ಭವನಕ್ಕೆ ಸಂದೇಶ ಕಳಿಸಬೇಕಾಗುತ್ತದೆ.

ಇದೇ ವೇಳೆ ಕಾಂಗ್ರೆಸ್ ಕೂಡ ರಾಷ್ಟ್ರಪತಿ ಭವನ್ ಚಲೋ ನಡೆಸುವ ಬಗ್ಗೆ ಚಿಂತನೆ ನಡೆಸಿದೆ. ರಾಜ್ಯಪಾಲರು ಅಭಿಯೋಜನೆಗೆ ಅವಕಾಶ ನೀಡುತ್ತಾರೋ ಇಲ್ಲವೋ ಎಂದು ರಾಜ್ಯ ಸರ್ಕಾರ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಇನ್ನೊಂದು ಹಂತದಲ್ಲಿ ಕಾನೂನು ಅಭಿಪ್ರಾಯ ಪಡೆದೇ ರಾಜ್ಯಪಾಲರು ತೀರ್ಮಾನ ಪ್ರಕಟಿಸುವರು. ಹೀಗಾಗಿ ಸರ್ಕಾರ ಈ ಅವಕಾಶ ಬಳಸಿಕೊಂಡು ರಾಜಭವನದ ಮೇಲೆ ಒತ್ತಡ ಹೇರಬಾರದೇಕೆ ಎಂದು ಚರ್ಚೆ ನಡೆಸಿದೆ.

ಬಹುಮತದ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ರಾಜಭವನವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ರಾಷ್ಟ್ರಪತಿಯವರಿಗೆ ದೂರು ಸಲ್ಲಿಸಲು ಉದ್ದೇಶಿಸಿದ್ದು, ಲೋಕಸಭೆ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕರ ನೇತೃತ್ವದಲ್ಲಿ ಕಾಂಗ್ರೆಸ್‌ನ ರಾಜ್ಯ ನಾಯಕರು ರಾಷ್ಟ್ರಪತಿ ಭವನ ಕದ ತಟ್ಟಲು ಬಯಸಿದ್ದಾರೆನ್ನಲಾಗಿದೆ. ಇಂಡಿ ಒಕ್ಕೂಟದ ಬೆಂಬಲ ಪಡೆದುಕೊಳ್ಳುವ ಆಲೋಚನೆಯೂ ಇದೆ ಎನ್ನಲಾಗಿದೆ.

* ಹೈ ಅಭಯ

ಶುಕ್ರವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕರೆ ಮಾಡಿ ಇಲ್ಲಿನ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆದುಕೊಂಡರೆಂದು ತಿಳಿದುಬಂದಿದೆ. ಮಂತ್ರಿ ಪರಿಷತ್ ನಿರ್ಣಯದ ಮೂಲಕ ಸರಿಯಾದ ದಿಕ್ಕಿನಲ್ಲಿ ಸಾಗಿದ್ದು, ಹೈಕಮಾಂಡ್ ನಿಮ್ಮ ಜತೆಗಿರುತ್ತದೆ ಎಂದು ಅಭಯ ನೀಡಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.