ನ್ಯೂಸ್

ಫೆಡೆಕ್ಸ್ ಕೊರಿಯರ್ ಹೆಸರಿನಲ್ಲಿ ವಂಚಿಸಿದ್ದ ೧೪ ಮಂದಿ ಸೆರೆ: ಬಂಧಿತರಿಂದ ೨೫.೪೭ ಲಕ್ಷ ರೂ.ಜಪ್ತಿ

ಬೆಂಗಳೂರು: ವಾಟ್ಸ್‌ಆ್ಯಪ್ ಕರೆ ಮಾಡಿ ಫೆಡೆಕ್ಸ್ ಕೊರಿಯರ್‌ನಲ್ಲಿ ನಿಮ್ಮ ಹೆಸರಿನಲ್ಲಿ ಮಾದಕ ವಸ್ತುಗಳು ಪೂರೈಕೆ ಆಗುತ್ತಿದೆ ಎಂದು ಪೊಲೀಸರ ಸೋಗಿನಲ್ಲಿ ಸಾರ್ವಜನಿಕರಿಗೆ ಬೆದರಿಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ ರಾಜ್ಯ ಹಾಗೂ ಹೊರ ರಾಜ್ಯದ ೧೪ ಮಂದಿ ಆರೋಪಿಗಳನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಪೊಲೀಸರು ಬಂಧಿಸಿದ್ದಾರೆ.


ರಾಜಸ್ಥಾನದ ಲಲಿತ್‌ಕುಮಾರ್, ರಮೇಶ್ ಕುಮಾರ್, ದಿಲೀಪ್ ಸೋನಿ, ಗುಜರಾತ್ ಆಹಮದಾಬ್‌ನ ಖಾಂಜಿ ಬಾಯ್ ರಾಬರಿ, ಕರ್ನಾಟಕ ರಾಜ್ಯದ ಭಟ್ಕಳದ ಆಸೀಂ ಅಪಂಡಿ, ಮಹಮ್ಮದ್ ಸಲೀಂ ಸೈಫ್, ಕೇರಳದ ಮಲ್ಲಪುರಂನ ನೌಫೆಲ್, ನಿಂಶಾಸ್, ರಿಯಾಜ್, ಕೆ.ಪಿ.ನೌಫಲ್, ಅರ್ಷದ್, ಎಂ.ಪಿ.ಆಷೀಕ್, ಮಹಮ್ಮದ್ ರಾಜಿ, ಮಕಾನಿ ಕರೀಂ ಲಾಲ್ ಬಂಧಿತರು.


ಆರೋಪಿಗಳು ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಸಿಕೊಂಡಿದ್ದ ೨೫.೪೭ ಲಕ್ಷ ರೂ. ೧೩ ಮೊಬೈಲ್ ೆನ್‌ಗಳು ಲ್ಯಾಪ್‌ಟಾಪ್ ಜಪ್ತಿ ಮಾಡಿಕೊಳ್ಳಲಾಗಿದೆ. ಬಂಧಿತರಲ್ಲಿ ಕೆಲವರು ವಿದ್ಯಾರ್ಥಿಗಳಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಆರೋಪಿಗಳನ್ನು ಬಲೆಗೆ ಕೆಡವಿದ ಎಸ್‌ಐಟಿ:
ಸೈಬರ್ ಅಪರಾಧ ಪ್ರಕರಣಗಳನ್ನು ಭೇದಿಸಲು ೪ ಎಸ್‌ಐಟಿ ತಂಡ ರಚಿಸಲಾಗಿತ್ತು. ಫೆಡೆಕ್ಸ್‌ಗೆ ಸಂಬಂಧಿಸಿದಂತೆ ೩೩೦ ಪ್ರಕರಣಗಳ ತನಿಖೆಯನ್ನು ಪೂರ್ವ ಸಂಚಾರ ವಿಭಾಗದ ಡಿಸಿಪಿ ಕುಲದೀಪ್ ಜೈನ್ ನೇತೃತ್ವದ ತಂಡಕ್ಕೆ ವಹಿಸಲಾಗಿತ್ತು. ಈ ತಂಡ ಆರೋಪಿಗಳನ್ನು ಬಂಧಿಸಿ ಆರು ಪ್ರಕರಣಗಳನ್ನು ಪತ್ತೆ ಹಚ್ಚಿದೆ. ಫೆಡೆಕ್ಸ್ ವಂಚನೆಗೆ ಸಂಬಂಧಿಸಿದಂತೆ ದೇಶದಾದ್ಯಂತ ದಾಖಲಾಗಿದ್ದ ೫೪೬ ಪ್ರಕರಣಗಳಲ್ಲಿ ಈ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಹಣ ವರ್ಗಾವಣೆಗೆ ಬಳಕೆ ಮಾಡಿಕೊಳ್ಳಲಾಗಿತ್ತು. ಕೆಲವರು ತಮ್ಮ ಖಾತೆಗಳನ್ನು ಕಮೀಷನ್ ಆಸೆಗೆ ಬಿದ್ದು ಹಣ ವರ್ಗಾವಣೆ ಮಾಡಲು ಬಾಡಿಗೆಗೆ ನೀಡಿದ್ದರು. ಆರೋಪಿಗಳ ಬಂಧನದಿಂದ ನಗರದ ಆರು ಪ್ರಕರಣಗಳು ಪತ್ತೆಯಾಗಿವೆ. ಫೆಡೆಕ್ಸ್‌ಗೆ ಸಂಬಂಧಿಸಿದಂತೆ ನಗರದ ಪೊಲೀಸರು ಮೊದಲ ಬಾರಿಗೆ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವಿವರಿಸಿದ್ದಾರೆ.
ವಿದೇಶದಿಂದ ನಿಯಂತ್ರಣ:
ಫೆಡೆಕ್ಸ್ ವಂಚನೆ ಸಂಬಂಧ ದೇಶದಾದ್ಯಂತ ಸಾವಿರಾರು ಪ್ರಕರಣಗಳು ದಾಖಲಾಗಿವೆ. ಪ್ರಮುಖ ಆರೋಪಿ ವಿದೇಶದಿಂದ ಕಾರ್ಯಾಚರಣೆ ಮಾಡುತ್ತಿರಬಹುದು. ಈ ಬಗ್ಗೆ ತನಿಖೆ ಮುಂದುವರಿದಿದೆ. ಆರು ಪ್ರಕರಣಗಳಲ್ಲಿ ಅಂದಾಜು ೨ ಕೋಟಿಯಷ್ಟು ವಂಚನೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.