ನ್ಯೂಸ್

ಮೂರು ವಿದೇಶಿ ಪ್ರಜೆ ಸೇರಿ 14 ಮಂದಿ ಡ್ರಗ್ ಪೆಡ್ಲರ್‌ಗಳ ಸೆರೆ


ಬೆಂಗಳೂರು: ಅಂತರಾಷ್ಟ್ರೀಯ ಮತ್ತು ಅಂತರಾಜ್ಯ ಡ್ರಗ್ ಪೆಡ್ಲರ್‌ಗಳು ಸೇರಿ 14 ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು 7.83 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಪ್ರಕರಣದಲ್ಲಿ ಮೂವರು ವಿದೇಶಿ ಪ್ರಜೆಗಳು, ಒರಿಸ್ಸಾದ ೪, ಕೇರಳದ ೪, ಬೆಂಗಳೂರಿನ ಮೂವರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ರೋಬಿನ್ ಜೋನ್, ಅಕ್ಷಯ್, ರೋಹಿತ್ ಆದಿತ್ಯ, ವಿಶಾಲ್ ವೀರ್, ಸಾಯಿ ಚೈತನ್ಯ ಸೇರಿ ೧೪ ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಬಿ ಪೊಲೀಸರು ನಗರದ ವರ್ತೂರು, ಬನಶಂಕರಿ, ವಿದ್ಯಾರಣ್ಯಪುರ, ಕಾಟನ್‌ಪೇಟೆ, ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕ್ಷಿಪ್ರ ಕಾರ್ಯಾಚರಣೆಯನ್ನು ನಡೆಸಿ ೭ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.


ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ಮಂದಿಯನ್ನು ಬಂಧಿಸಿ ೧೩ ಲಕ್ಷ ರೂ. ಮೌಲ್ಯದ ಮಾದಕ ವಸ್ತು, ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರನ್ನು ಬಂಧಿಸಿ ೧.೨೦ ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು, ೨ ಮೊಬೈಲ್, ೧೬ ಸಿರಿಂಜ್‌ಗಳು, ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರನ್ನು ಬಂಧಿಸಿ ೧.೨೫ ಕೋಟಿ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್, ೧ ಮೊಬೈಲ್, ಕಾಟನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ಮೂವರನ್ನು ಬಂಧಿಸಿ ೧.೪೦ ಕೋಟಿ ರೂ.ಮೌಲ್ಯದ ಗಾಂಜಾ, ಕಾರು, ಮೊಬೈಲ್ ವಶಪಡಿಸಿಕೊಂಡರೆ ಕಾಡುಗೋಡಿಯಲ್ಲಿ ಒಬ್ಬಾತನನ್ನು ಬಂಧಿಸಿ ೩.೮೫ ಕೋಟಿ ರೂ. ಮೌಲ್ಯದ ವಿವಿಧ ಮಾದಕ ವಸ್ತುಗಳು, ಕಾರು, ಸ್ಕೂಟರ್, ೧ ಮೊಬೈಲ್, ತೂಕದ ಯಂತ್ರ, ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಆರೋಪಿಗಳಿಂದ ನಿಷೇಧಿತ ಮಾದಕ ವಸ್ತುಗಳಾದ ೧೮೨ ಕೆಜಿ ತೂಕದ ಗಾಂಜಾ, ೧೪೫೦ ಕೆಜಿ ಆಶಿಷ್ ಆಯಿಲ್, ೧೬.೨ ಗ್ರಾಂ ಎಂಡಿಎನ್‌ಎ ಕ್ರಿಸ್ಟೆಲ್, ೧೩೫ ಎಕ್ಸ್‌ಟಸಿ ಮಾತ್ರೆಗಳು, ವೈಟ್‌ಪೌಡರ್ ೧ ಕೆ.ಜಿ, ಮಫಡ್ರಿನ್ ಕ್ರಿಸ್ಟೆಲ್ ೮೭೦ ಗ್ರಾಂ, ಕೊಕೈನ್ ೮೦ ಗ್ರಾಂ, ಎಂಡಿಎಂಎ ಎಕ್ಸ್‌ಟಸಿ ಪೌಡರ್ ೨೩೦ ಗ್ರಾಂ ಹಾಗೂ ೮ ಮೊಬೈಲ್‌ಗಳು, ೨ ಕಾರು, ೧ ಸ್ಕೂಟರ್, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಪ ಪೊಲೀಸ್ ಆಯುಕ್ತ (ಅಪರಾಧ-೨) ಆರ್. ಶ್ರೀನಿವಾಸಗೌಡ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಡಿ. ಕುಮಾರ್ ಅವರ ನೇತೃತ್ವದಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.