ನ್ಯೂಸ್

14 ದಿನದಲ್ಲಿ 14 ಕೋಟಿ ರೂ. ಕನ್ನ

ಬೆಂಗಳೂರು: ಮೊಬೈಲ್ ರಿಚಾರ್ಜ್, ಬ್ಯಾಂಕ್ ಸಾಲದ ಕಂತು ಇನ್ನಿತರ ಹಣಕಾಸು ವಹಿವಾಟಿಗೆ ವೇದಿಕೆ ಕಲ್ಪಿಸಿದ್ದ ಖಾಸಗಿ ಕಂಪನಿಗೆ ಗ್ರಾಹಕರ ಸೋಗಿನಲ್ಲಿ ಸೈಬರ್ ಕಳ್ಳರು 14 ದಿನಗಳಲ್ಲಿ 14 ಕೋಟಿ ರೂ. ವಂಚಿಸಿದ್ದಾರೆ.

ಇಬ್ಬಲೂರಿನ ಗ್ರಾಮದಲ್ಲಿನ ನವಿ ಟೆಕ್ನಾಲಜೀಸ್ ಲಿಮಿಟೆಡ್ ಕಂಪನಿಗೆ ವಂಚನೆ ಆಗಿದ್ದು, ಈ ಕುರಿತು ಶ್ರೀನಿವಾಸ್ ಗೌಡ ಎಂಬುವರು ವೈಟ್‌ಫೀಲ್ಡ್ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವಿ ಆ್ಯಪ್ ಗ್ರಾಹಕರಿಗೆ ಮೊಬೈಲ್ ರಿಚಾರ್ಜ್, ಸಾಲದ ಕಂತು ಪಾವತಿ, ಒಟಿಟಿ, ಇಎಂಐ ಪಾವತಿಗೆ ಭಾರತದ ಬಿಲ್ ಪೇಮೆಂಟ್ ಸಿಸ್ಟಮ್ ಮೂಲಕ ಮತ್ತು ಇತರ ರೀತಿಯ ಪಾವತಿಗಳ ಮೂಲಕ ವೇದಿಕೆ ಕಲ್ಪಿಸುವ ಸೇವೆಯನ್ನು ಒದಗಿಸಲಾಗುತ್ತದೆ. ಗ್ರಾಹಕರಿಗೆ ರಿಚಾರ್ಜ್, ಬಿಲ್ ಪಾವತಿ ವೇಳೆ ಅವರಿಗೆ ಪಾವತಿ ಮೊತ್ತ ಆಯ್ಕೆ ಅಥವಾ ತಿದ್ದಲು ಅಕವಾಶವಿದೆ. ಪ್ಲಿಪ್‌ಕಾರ್ಟ್ ಯುಪಿಐ ಗ್ರಾಹಕರು ಪಾವತಿ ಮಾಡಬೇಕಾದ ಸಮಯದಲ್ಲಿ ಮೊತ್ತವನ್ನು ತಿದ್ದುಪಡಿ ಮಾಡಲು ಅನುಮತಿಸಲಾಗಿದೆ.

ಕೆಲ ಗ್ರಾಹಕರು ವಂಚನೆ ಮಾಡುವ ಉದ್ದೇಶದಿಂದ 3,999 ರೂ. ಮೊತ್ತದ ಬಿಲ್ ಪಾವತಿ ಮಾಡುವಾಗ ಕೇವಲ 1 ರೂ. ಆಯ್ಕೆ ಮಾಡಿಕೊಂಡು ಬಿಲ್ ಪ್ರಕ್ರಿಯೆ ಪೂರ್ಣ ಮಾಡಿದ್ದಾರೆ. 1 ರೂ. ಪಾವತಿಸಿದ ಬಳಿಕ ನವಿ ಆ್ಯಪ್‌ಗೆ ಪಾವತಿ ಯಶಸ್ವಿ ಎಂಬ ಮಾಹಿತಿ ದೊರೆಯಲಿದೆ. ಆದರಿಂದ ನವಿ ಆ್ಯಪ್ ಕಂಪನಿ ಗ್ರಾಹಕರ ಹೆಸರಿನಲ್ಲಿ ಸಂಬಂಧಪಟ್ಟ ಕಂಪನಿಗೆ ಹಣವನ್ನು ಪಾವತಿ ಮಾಡಿದೆ. ದೋಷಪೂರಿತ ಪಾವತಿಯಿಂದ ನವಿ ಆ್ಯಪ್ ಕಂಪನಿಗೆ ಡಿ. 10ರಿಂದ 24ರ ನಡುವೆ 14.26 ಕೋಟಿ ರೂ. ಆರ್ಥಿಕ ನಷ್ಟವಾಗಿದೆ. ಮೋಸ ಮಾಡುವ ಉದ್ದೇಶದಿಂದ ಅಪರಿಚಿತ ವ್ಯಕ್ತಿಗಳು ದೋಷಪೂರಿತ ಪಾವತಿ ಮಾಡಿದವರನ್ನು ಪತ್ತೆಹಚ್ಚಿ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಶ್ರೀನಿವಾಸ್ ಗೌಡ ಉಲ್ಲೇಖಿಸಿದ್ದಾರೆ.