ನ್ಯೂಸ್

13ರಂದು ಜಿಲ್ಲಾ ರೈತ ಸಮಾವೇಶ

ರಾಜ್ಯ ರೈತ ಸಂಘದಿಂದ ಫೆ.13ರ ಮಧ್ಯಾಹ್ನ 12ಕ್ಕೆ ಪುರಭವನ ಆವರಣದಲ್ಲಿ ರೈತ ಮುಖಂಡ ದಿ. ಪ್ರೊ.ಎಂ.ಡಿ.ನಂಜುಂಡಸ್ವಾಮಿ ನೆನಪಿನಲ್ಲಿ ಜಿಲ್ಲಾ ರೈತ ಸಮಾವೇಶ ಆಯೋಜಿಸಲಾಗಿದೆ ಎಂದು ರಾಜ್ಯ ಉಪಾಧ್ಯಕ್ಷ ಎ.ಎಲ್.ಕೆಂಪೂಗೌಡ ತಿಳಿಸಿದರು.

ಅಂದು ಬೆಳಗ್ಗೆ 11.55ಕ್ಕೆ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಯಧುಶೈಲ ಸಂಘದ ಧ್ವಜಾರೋಹಣ ನೆರವೇರಿಸುವರು. 12ಕ್ಕೆ ಸಮಾಜವಾದಿ ಚಿಂತಕ ಡಾ.ಸುನೀಲಂ ಸಮಾವೇಶ ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಅಧ್ಯಕ್ಷತೆ ವಹಿಸುವರು. ಶಾಸಕ ಬಿ.ಆರ್.ಪಾಟೀಲ್, ಡಾ.ವಿ.ವಾಸು, ಕೃಷಿ ವಿಜ್ಞಾನಿ ಡಾ.ಪ್ರಕಾಶ್ ಕಮ್ಮರಡಿ, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಚಾಮರಸ ಮಾಲೀ ಪಾಟೀಲ್ ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮುಖಂಡ ಹೊಸಕೋಟೆ ಬಸವರಾಜು ಮಾತನಾಡಿ, ಮೈಕ್ರೋ ಫೈನಾನ್ಸ್‌ಗಳು ವಸೂಲಿಗೆ ವಾಮಮಾರ್ಗ ಅನುಸರಿಸಿ ರೈತರು, ಕೂಲಿ ಕಾರ್ಮಿಕರಿಗೆ ಕಿರುಕುಳ ನೀಡುತ್ತಿವೆ. ಆರ್‌ಬಿಐ ನಿಯಮ ಪಾಲಿಸುತ್ತಿಲ್ಲ. ಆದಾಯ ಮೀರಿ ಸಾಲ ನೀಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು, ಸೊಸೈಟಿಗಳು ರೈತರಿಗೆ ಸಾಲ ನೀಡುವುದಕ್ಕೆ ಆದ್ಯತೆ ನೀಡದಿರುವುದೇ ಜನತೆ ಮೈಕ್ರೋ ಫೈನಾನ್ಸ್‌ಗಳಿಗೆ ಸಿಲುಕಲು ಕಾರಣವಾಗಿದೆ ಎಂದು ದೂರಿದರು.

ನಬಾರ್ಡ್ ಸಹಾ ರಾಜ್ಯಕ್ಕೆ ಕಡಿಮೆ ಹಣ ನೀಡುವುದರಿಂದಲೂ ಸೊಸೈಟಿಗಳಲ್ಲಿ ಸಾಲ ಸಿಗುತ್ತಿಲ್ಲ. ಸುಗ್ರೀವಾಜ್ಞೆ ಹೊರಡಿಸಿದರೂ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಆದ್ದರಿಂದ ವಾಣಿಜ್ಯ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡುವುದಕ್ಕೆ ಆದ್ಯತೆ ನೀಡಬೇಕು ಎಂದರು.

ಮುಖಂಡರಾದ ನಾಗನಹಳ್ಳಿ ವಿಜೇಂದ್ರ, ಮಹೇಶ್, ಚಂದ್ರಶೇಖರ್ ಇದ್ದರು.