ನ್ಯೂಸ್

135 ಚೀಲ ಯೂರಿಯೂ ರಸಗೊಬ್ಬರ ವಶಕ್ಕೆ

ನಂಜನಗೂಡು: ಕೃಷಿ ಉಪಯೋಗಕ್ಕೆ ಬಳಸುವ ಸಬ್ಸಿಡಿ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಕೈಗಾರಿಕೆ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ 135 ಚೀಲ ಯೂರಿಯೂ ರಸಗೊಬ್ಬರವನ್ನು ವಶಕ್ಕೆ ಪಡೆದಿದ್ದಾರೆ.


ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಹರ್ಷ ಇಂಪೆಕ್ಸ್ ಕಾರ್ಖಾನೆಯಲ್ಲಿ ಸಬ್ಸಿಡಿ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನುಗೊಳಿಸಿ ಅದನ್ನು ಪ್ಲೈವುಡ್ ಗಮ್ ತಯಾರಿಕೆಗಾಗಿ ಬಳಸಿಕೊಳ್ಳಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್, ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು ಕಾರ್ಖಾನೆಗೆ ತೆರಳಿದಾಗ ದಾಸ್ತಾನು ಮಾಡಿದ್ದ ಸಬ್ಸಿಡಿ ಯೂರಿಯಾ ರಸಗೊಬ್ಬರ ಕಂಡು ಪೊಲೀಸರು ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬುಧವಾರ ಕೃಷಿ ಇಲಾಖೆ ಅಧಿಕಾರಿಗಳು, ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕಾರ್ಖಾನೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 135 ಚೀಲ ಸಬ್ಸಿಡಿ ಯೂರಿಯೂ ವಶಕ್ಕೆ ಪಡೆದಿದ್ದಾರೆ.


ಕೃಷಿ ಸಹಾಯಕ ನಿರ್ದೇಶಕ ದೀಪಕ್ ಮಾತನಾಡಿ, ರೈತ ಸಂಘದ ಪದಾಧಿಕಾರಿಗಳ ಮಾಹಿತಿ ಮೇರೆಗೆ ಕಾರ್ಖಾನೆಯ ಮೇಲೆ ದಾಳಿ ನಡೆಸಿದಾಗ 47 ಕೆಜಿ ತೂಕವಿರುವ 135 ಚೀಲ ಸಬ್ಸಿಡಿ ಯೂರಿಯಾ ರಸಗೊಬ್ಬರ ಕಂಡುಬಂತು. ಚೀಲಗಳ ಮೇಲೆ ಸಬ್ಸಿಡಿ ಯೂರಿಯಾ ರಸಗೊಬ್ಬರ ಮತ್ತು ಕೃಷಿ ಉಪಯೋಗಕ್ಕೆ ಮಾತ್ರ ಎಂಬುದಾಗಿ ನಮೂದಾಗಿತ್ತು. ದಾಸ್ತಾನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಯೂರಿಯಾ ಮಾದರಿಯನ್ನು ಸಂಗ್ರಹಿಸಿ ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದರು.


ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ಮಾತನಾಡಿ, ಸಬ್ಸಿಡಿ ರಸಗೊಬ್ಬರಗಳು ಇಂತಹ ಅಕ್ರಮ ದಂಧೆ ನಡೆಸುವ ಕೈಗಾರಿಕೆಗಳ ಪಾಲಾಗುತ್ತಿದೆ. ಇದರಿಂದ ರೈತರಿಗೆ ರಸಗೊಬ್ಬರದ ಅಭಾವ ಉಂಟಾಗುತ್ತಿದೆ. ಆದ್ದರಿಂದ ಇಂತಹ ಅಕ್ರಮ ದಂಧೆಯಲ್ಲಿ ತೊಡಗಿರುವ ಕೈಗಾರಿಕೆಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.


ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೀಪಕ್ ನೀಡಿದ ದೂರಿನ ಮೇರೆಗೆ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ಸ್‌ಪೆಕ್ಟರ್ ಶಿವನಂಜಶೆಟ್ಟಿ ತನಿಖೆ ಮುಂದುವರಿಸಿದ್ದಾರೆ.


ತಹಸೀಲ್ದಾರ್ ಶಿವಮೂರ್ತಿ, ಉಪತಹಸೀಲ್ದಾರ್ ಪ್ರಶಾಂತ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ಸತೀಶ್‌ರಾವ್, ಇಮ್ಮಾವು ರಘು ಇತರರಿದ್ದರು.