ನ್ಯೂಸ್

130 ಬೈಕ್ ಟ್ಯಾಕ್ಸಿಗಳು ಜಪ್ತಿ

ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಮತ್ತು ವೈಟ್ ಬೋರ್ಡ್ ಟ್ಯಾಕ್ಸಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ಆರ್‌ಟಿಒ ಅಧಿಕಾರಿಗಳು ಮೊದಲ ದಿನವೇ ೨೯ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಒಳಗೊಂಡಂತೆ ಅನಧಿಕೃತವಾಗಿ ಸಂಚರಿಸುತ್ತಿದ್ದ ೧೩೩ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಮತ್ತು ವೈಟ್ ಬೋರ್ಡ್ ಟ್ಯಾಕ್ಸಿಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಗುರುವಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಖುದ್ದು ಫೀಲ್ಡ್‌ಗೆ ಇಳಿದ ಆರ್‌ಟಿಒ ಅಧಿಕಾರಿಗಳು ಬೆಂಗಳೂರು ನಗರ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವ್ಯಾಪ್ತಿಯ ೧೧ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಪೂರ್ವ ವಿಭಾಗದ ಆರ್‌ಟಿಒ ಅಧಿಕಾರಿ ಬಿ.ಶ್ರೀನಿವಾಸ್ ಪ್ರಸಾದ್ ನೇತೃತ್ವದಲ್ಲಿ ರಾಕೇಶ್, ಪ್ರಭು ಅಧಿಕಾರಿಗಳ ಮತ್ತು ಸಿಬ್ಬಂದಿ ತಂಡ ಹೆಣ್ಣೂರು ರಸ್ತೆ ಜಂಕ್ಷನ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ೧೫ ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಯಶವಂತಪುರ-೧೬, ಕೋರಮಂಗಲ-೧೮, ಕೆ.ಆರ್.ಪುರ-೧೦, ಎಲೆಕ್ಟ್ರಾನಿಕ್ ಸಿಟಿ-೧೨, ಜಯನಗರ ೧೨, ಯಲಹಂಕ-೧೫, ಜ್ಞಾನಭಾರತಿ-೧೧ ಚಂದಾಪುರ-೧೧ ಮತ್ತು ದೇವನಹಳ್ಳಿ ಆರ್‌ಟಿಒ ವ್ಯಾಪ್ತಿಯಲ್ಲಿ -೯ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಕಾರ್ಯಾಚರಣೆ ಮುಂದುವರಿಯಲಿದೆ:
ಕಾರ್ಯಾಚರಣೆಯನ್ನು ಕೇವಲ ಒಂದೇ ದಿನಕ್ಕೆ ಸೀಮಿತಗೊಳಿಸದೆ ಮುಂದಿನ ಆದೇಶದವರೆಗೆ ಮುಂದುವರಿಸುವಂತೆಯೂ ಆಯುಕ್ತರು ಆದೇಶದಲ್ಲಿ ಸೂಚಿಸಿದ್ದರು.ಹೀಗಾಗಿ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುತ್ತಿಗೆ ಹಾಕಿದ್ದ ಚಾಲಕರು:
ಎಲೆಕ್ಟ್ರಿಕ್, ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತ, ಒನ್ ಸಿಟಿ ಓನ್ ೇರ್ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನೂರಾರು ಚಾಲಕರು ಶಾಂತಿನಗರದ ಸಾರಿಗೆ ಇಲಾಖೆ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿದರು. ಅನಿವಾರ್ಯವಾಗಿ ಸಭೆ ನಡೆಸಿದ ಸಾರಿಗೆ ಇಲಾಖೆ ಅಧಿಕಾರಿಗಳು, ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಕೆಲವೇ ತಾಸಿನಲ್ಲಿ ಆದೇಶಿಸಿದರು.