ನ್ಯೂಸ್

13 ಸಾವಿರ ಬಾತುಕೋಳಿ ಸಾವು.. ನಷ್ಟ ಸಹಿಸಲಾಗದೆ ಮಹಿಳೆ ಹೃದಯಾಘಾತಕ್ಕೆ ಬಲಿ

ನವದೆಹಲಿ:  ಮಿಚಾಂಗ್ ಚಂಡಮಾರುತವು ತೆಲುಗು ರಾಜ್ಯಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಹಲವೆಡೆ ಬೆಳೆ ಮುಳುಗಿದ್ದು, ರೈತರು ನಷ್ಟ ಅನುಭವಿಸಿದ್ದಾರೆ. ಇನ್ನು ಕೆಲವೆಡೆ ಮೂಕ ಜೀವಿಗಳು ಸಾವನ್ನಪ್ಪಿವೆ. ತೆಲಂಗಾಣದ ಖಮ್ಮಂ ಜಿಲ್ಲೆಯ ಸತ್ತುಪಲ್ಲಿ ಮಂಡಲದ ಕಿಷ್ಟಾಪುರಂನಲ್ಲಿ ಚಳಿ ಮತ್ತು ಮಳೆಯಿಂದಾಗಿ ಸುಮಾರು 13 ಸಾವಿರ ಬಾತುಕೋಳಿಗಳು ಸಾವನ್ನಪ್ಪಿವೆ. ಹಾನಿಯನ್ನು ತಾಳಲಾರದೆ ವೃದ್ಧೆ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.

ಆದಿಲಕ್ಷ್ಮಿ (67) ಮೃತ ಮಹಿಳೆ. ಆಂಧ್ರದ ಎನ್ ಟಿಆರ್ ಜಿಲ್ಲೆಯ ಜಗ್ಗಾಯಪೇಟೆಯ ನಿವಾಸಿಯಾಗಿದ್ದಾರೆ. 2 ತಿಂಗಳ ಹಿಂದೆ ಬಾತುಕೋಳಿ ಸಾಕಣೆಗಾಗಿ ತೆಲಂಗಾಣದ ಖಮ್ಮಂ ಜಿಲ್ಲೆಯ ಸತ್ತುಪಲ್ಲಿ ಮಂಡಲದ ಕಿಷ್ಟಾಪುರಕ್ಕೆ ಬಂದಿದ್ದರು. ಗ್ರಾಮದ ಹೊರವಲಯದಲ್ಲಿ ಸುಮಾರು 15 ಸಾವಿರ ಬಾತುಕೋಳಿಗಳನ್ನು ಸಾಕುತ್ತಾ ಜೀವನ ನಡೆಸುತ್ತಿದ್ದರು. ಚಂಡಮಾರುತದಿಂದಾಗಿ ಮಂಗಳವಾರ ಮಧ್ಯರಾತ್ರಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯಿತು. ಇದರಿಂದಾಗಿ  ಸಾಕಿದ್ದ ಸುಮಾರು 13 ಸಾವಿರ ಬಾತುಕೋಳಿಗಳು ಸಾವನ್ನಪ್ಪಿವೆ.

ಬಾತುಕೋಳಿ ಸಾವನ್ನಪ್ಪರುವುದರಿಂದ ಕುಟುಂಬಕ್ಕೆ ಆಘಾತವಾಗಿತ್ತು. ಸುಮಾರು 15 ಲಕ್ಷ ರೂ. ನಷ್ಟವಾಗಿತ್ತು. ಸತ್ತ ಬಾತುಕೋಳಿಗಳನ್ನು ನೋಡಿದ ಕುಟುಂಬಸ್ಥರು, ಹಾನಿಯ ಆತಂಕದಲ್ಲಿದ್ದರು. ಆದರೆ ಆದಿಲಕ್ಷ್ಮಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಂತ್ರಸ್ತರಿಂದ ವಿವರ ಸಂಗ್ರಹಿಸಿದ್ದಾರೆ. ಸರ್ಕಾರದಿಂದ ಆರ್ಥಿಕ ನೆರವು ನೀಡಲು ಪ್ರಯತ್ನಿಸಲಾಗುವುದು ಎಂದಿದ್ದಾರೆ.