ನ್ಯೂಸ್

5 ವರ್ಷದ ಮಗನನ್ನು ಮನೆಯಲ್ಲಿ ಬಿಟ್ಟು ಹೊರಹೋದ ಪಾಲಕರಿಗೆ ಶಾಕ್​; ವೈದ್ಯರೇ ಕಂಗಾಲು

5 ವರ್ಷದ ಬಾಲಕನನ್ನು ಒಬ್ಬನನ್ನೇ ಮನೆಯಲ್ಲಿ ಬಿಟ್ಟು ಹೋಗಿದ್ದ ಪಾಲಕರು ದುಬಾರಿ ಬೆಲೆ ತೆರಬೇಕಾಗಿ ಬಂದ ಘಟನೆ ನಡೆದಿದೆ.

ಚೀನಾದ ಈ ಬಾಲಕ ಮನೆಯಲ್ಲಿ ತನ್ನ ಅಕ್ಕನ ಜತೆ ಇದ್ದಾಗ ಟಿವಿ ನೋಡುತ್ತ ಬರೋಬ್ಬರಿ 123 ಮ್ಯಾಗ್ನೆಟಿಕ್​ ಮಣಿಗಳನ್ನು ನುಂಗಿದ್ದ. ನಂತರ ಸರ್ಜರಿ ಮಾಡಿ ಅದನ್ನು ಹೊರತೆಗೆಯಲಾಗಿದೆ.

12ವರ್ಷದ ಬಾಲಕಿಯೊಂದಿಗೆ 5ವರ್ಷದ ಬಾಲಕನನ್ನು ಬಿಟ್ಟು ಪಾಲಕರು ಹೊರಗೆ, ಕೆಲಸದ ನಿಮಿತ್ತ ಹೋಗಿದ್ದರು. ಆತ ಟಿವಿ ನೋಡುತ್ತ ಅದೆಷ್ಟು ಮಗ್ನನಾಗಿದ್ದ ಎಂದರೆ, ತನ್ನ ಪಕ್ಕದಲ್ಲಿದ್ದ ಈ ಮಣಿಗಳನ್ನು ಒಂದಾದನಂತರ ಒಂದರಂತೆ ನುಂಗಿದ್ದಾನೆ.  ಇದನ್ನೂ ಓದಿ: ಮಹಿಳೆಯರು ಸ್ನಾನ ಮಾಡುವುದನ್ನು ಸೆರೆಹಿಡಿದು ಬ್ಲ್ಯಾಕ್​ಮೇಲ್​: ಜೈಲಿನಿಂದ ಬಂದ ಬೆನ್ನಲ್ಲೇ ಮತ್ತೊಂದು ಕೃತ್ಯ!

ಆದರೆ ಪಾಲಕರು ವಾಪಸ್​ ಬಂದಾಗ ಬಾಲಕ ತಾನು ಒಂದೇ ಒಂದು ಮಣಿ ನುಂಗಿದ್ದಾಗಿ ತಿಳಿಸಿದ್ದ. ಕೂಡಲೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಕೆಲವೇ ದಿನಗಳಲ್ಲಿ ಮಣಿ ದೇಹದಿಂದ ಈಚೆ ಬರುತ್ತದೆ ಎಂದು ವೈದ್ಯರು ಹೇಳಿದ್ದರು. ಆದರೆ ವಾರವಾದರೂ ಮಣಿ ಹೊರಗೆ ಬಾರದ ಕಾರಣ ಮತ್ತೆ ವೈದ್ಯರ ಬಳಿ ಹೋದರು.

ಆಗ ವೈದ್ಯರು ಎಕ್ಸ್​ರೇ ಮಾಡಿದಾಗ ಶಾಕ್​ ಕಾದಿತ್ತು. ಚಿಕ್ಕಚಿಕ್ಕ ಮಣಿಗಳು ಒಂದಕ್ಕೊಂದು ಅಂಟಿಕೊಂಡಂತೆ ಸೇರಿದ್ದವು. ತುರ್ತಾಗಿ ಸರ್ಜರಿ ಮಾಡಿ, ಅಷ್ಟನ್ನೂ ಹೊರತೆಗೆಯಲಾಗಿದೆ.

ಇಷ್ಟೊಂದು ಸಂಖ್ಯೆಯಲ್ಲಿ ಮ್ಯಾಗ್ನೆಟಿಕ್​ ಮಣಿಗಳನ್ನು ನುಂಗುವುದು ತೀರ ಅಪರೂಪ. ಇದರಲ್ಲಿ ದೊಡ್ಡದೊಡ್ಡ ಮಣಿಗಳೂ ಇದ್ದವು. ಆಪರೇಶನ್​ ತುಂಬ ಸಮಯ ಹಿಡಿಯಿತು. ಕಷ್ಟವೂ ಆಗಿತ್ತು. ಸದ್ಯ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ. ಎಂದು ಸರ್ಜನ್​ ಡಾ. ವಾನ್ವೇ ಚೆನ್ ತಿಳಿಸಿದ್ದಾರೆ. (ಏಜೆನ್ಸೀಸ್​)