ಬೆಂಗಳೂರು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 2024-25ನೇ ಸಾಲಿನಲ್ಲಿ 1ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಲ್ಲ ಮಕ್ಕಳಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಖರೀದಿಗೆ ಸರ್ಕಾರವು 121 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಅರ್ಹ ವಿದ್ಯಾರ್ಥಿಗಳ ಪಾದರಕ್ಷೆಗಳ ಅಳತೆ ದಾಖಲಿಸಿ ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ಸ್ಥಳೀಯವಾಗಿ ಖರೀದಿಸಿ ವಿತರಣೆ ಮಾಡುವ ಜವಾಬ್ದಾರಿಯನ್ನು ಸಂಬಂಧಿಸಿದ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಗೆ ವಹಿಸಲಾಗಿದೆ. ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಶೂ ಮತ್ತು ಸಾಕ್ಸ್‌ಗಳ ಬದಲಾಗಿ ಪಾದರಕ್ಷೆಗಳನ್ನು ಸಹ ಖರೀದಿ ಮಾಡಬಹುದು ಎಂದು ತಿಳಿಸಿದೆ.
1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 265 ರೂ., 6ರಿಂದ 8ನೇ ತರಗತಿಗೆ 295 ರೂ. ಹಾಗೂ 9 ಮತ್ತು 10ನೇ ತರಗತಿಗೆ 325 ರೂ.ಗಳನ್ನು ನಿಗದಿ ಮಾಡಿದೆ.
ಶೂ ಮತ್ತು ಸಾಕ್ಸ್ ಖರೀದಿಗೂ ಮುನ್ನ ಎಸ್‌ಡಿಎಂಸಿ ಅಧ್ಯಕ್ಷರ ಅಧಕ್ಷತೆಯಲ್ಲಿ ಸಮಿತಿ ರಚಿಸಬೇಕು. ಸಮಿತಿಯಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಮೂವರು ಎಸ್‌ಡಿಎಂಸಿ ಸದಸ್ಯರು ಇರಬೇಕೆಂದು ತಿಳಿಸಿದೆ. ಮೂರು ಸಂಸ್ಥೆಗಳಿಂದ ಕೊಟೇಷನ್ ಪಡೆದು ಕೆಟಿಟಿಪಿ ಆಕ್ಟ್ ಪ್ರಕಾರ ಖರೀದಿ ಪ್ರಕ್ರಿಯೆಯನ್ನು ನಿರ್ವಹಿಸಬೇಕು ಎಂಬ ಸೂಚನೆ ನೀಡಲಾಗಿದೆ.
ಪ್ರತಿ ತಾಲ್ಲೂಕಿನಲ್ಲಿ ಶೂ ಮತ್ತು ಸಾಕ್ಸ್ ಗುಣಮಟ್ಟವನ್ನು ಯಾದೃಚ್ಛಿಕವಾಗಿ ಪರೀಕ್ಷಿಸಲು ಜಿಪಂ ಸಿಇಒ ಅವರು ಸಮಿತಿ ರಚಿಸಿ ಕ್ರಮ ಕೈಗೊಳ್ಳುವುದು. ಹಿಂದಿನ ಸಾಲಿನಲ್ಲಿ ಕಳಪೆ ಶೂ ಮತ್ತು ಸಾಕ್ಸ್ ಖರೀದಿಸಿರುವ ಬಗ್ಗೆ ದೂರುಗಳಿವೆ. ಆದ್ದರಿಂದ ಖರೀದಿ ಪ್ರಕ್ರಿಯೆಯಲ್ಲಿ ಎಚ್ಚರಿಕೆ ವಹಿಸುವಂತೆ ಶಾಲಾ ಶಿಕ್ಷಣ ಆಯುಕ್ತರು ಸುತ್ತೋಲೆ ಹೊರಡಿಸಿ ಸೂಚನೆ ನೀಡಿದ್ದಾರೆ.