ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಾದ್ಯಂತ ಪಾಕ್ ಸರ್ಕಾರದ ವಿರುದ್ಧ ಜನಾಕ್ರೋಶ ಮುಂದುವರಿದಿದ್ದು, ಪಾಕ್ ಸೇನೆ, ಪ್ರತಿಭಟನಾಕಾರರ ನಡುವಿನ ಸಂಘರ್ಷದಲ್ಲಿ 12 ನಾಗರಿಕರು ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜಮ್ಮು-ಕಾಶ್ಮೀರ ಜಂಟಿ ಆವಾಮಿ ಕ್ರಿಯಾ ಸಮಿತಿ (ಜೆಕೆಜೆಎಎಸಿ) ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಸರ್ಕಾರದ ನಡುವೆ 38 ಬೇಡಿಕೆಗಳ ಈಡೇರಿಕೆಗಾಗಿ ಸತತ 13 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆದಿತ್ತು. ಮಾತುಕತೆ ವಿಫಲವಾದ್ದರಿಂದ ಜೆಕೆಜೆಎಎಸಿ ಪ್ರತಿಭಟನೆಗೆ ಕರೆ ನೀಡಿತ್ತು. ಪ್ರತಿಭಟನೆ ಈಗ ತೀವ್ರಗೊಂಡಿದ್ದು, ಸೋಮವಾರ ಆರಂಭವಾದ ಪ್ರತಿಭಟನೆ ನಾಲ್ಕನೇ ದಿನವೂ ಮುಂದುವರಿದು ಇಡೀ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ವ್ಯಾಪಿಸಿದೆ. ಮುಜಫರಾಬಾದ್ ಭಾಗದಲ್ಲಿ ತೀವ್ರವಾಗಿದ್ದ ಪ್ರತಿಭಟನೆಗೆ ಈಗ ರವಾಲ್ಕೋಟ್, ನೀಲಂ ಕಣಿವೆ ಮತ್ತು ಕೋಟ್ಲಿ ಪ್ರದೇಶದಲ್ಲೂ ತೀವ್ರತೆ ಪಡೆದುಕೊಂಡಿದೆ.
ಪ್ರತಿಭಟನಾಕಾರರು ರಸ್ತೆಗಿಳಿದು ‘ಎಚ್ಚರದಿಂದಿರಿ ನಾವು ನಿಮ್ಮ ವಿನಾಶ, ಕಾಶ್ಮೀರ ನಮ್ಮದು, ನಾವು ಅದರ ಭವಿಷ್ಯ ನಿರ್ಧರಿಸುತ್ತೇವೆ’ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಗಲಭೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ಪಿಒಕೆಗೆ ಹೆಚ್ಚುವರಿ ಸೇನಾ ಪಡೆಗಳನ್ನು ರವಾನಿಸಿದ್ದು, ಸೇನಾ ಪಡೆಗಳು ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದು, ಅವರು ಗುಂಡಿನ ದಾಳಿಯಲ್ಲಿ ಮುಜಫರಾಬಾದ್ನಲ್ಲಿ ಐವರು, ಧೀರ್ಕೋಟ್ನಲ್ಲಿ ಐವರು ಹಾಗೂ ದಡಿಯಾಲ್ನಲ್ಲಿ ಇಬ್ಬರು ಪ್ರತಿಭಟನಾಕಾರು ಮೃತಪಟ್ಟಿದ್ದಾರೆ. ಮೂವರು ಪೊಲೀಸರೂ ಸಾವಿಗೀಡಾಗಿದ್ದು, ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ.
ಜನಜೀವನ ಸ್ತಬ್ಧ: ಪ್ರತಿಭಟನೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 29ರಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮೊಬೈಲ್ಫೋನ್, ಲ್ಯಾಂಡ್ಲೈನ್, ಇಂಟರ್ನೆಟ್ ಸೇವೆ ಬಂದ್ ಮಾಡಲಾಗಿದೆ. ಪ್ರತಿಭಟನಾಕಾರರನ್ನು ತಡೆಯಲು ಸೇನೆ ಕಂಟೇನರ್ಗಳನ್ನು ಹಾಗೂ ಕಲ್ಲುಗಳನ್ನು ರಸ್ತೆಗಳಿಗೆ ಅಡ್ಡಲಾಗಿ ಇರಿಸಿದೆ.
ಬೇಡಿಕೆಗಳೇನು?: ಆಡಳಿತದಲ್ಲಿ ಗಣ್ಯರಿಗೆ ನೀಡಿದ ಸವಲತ್ತುಗಳನ್ನು ತೆಗೆಯುವುದು, ಪಿಒಕೆಯ ವಿಧಾನಸಭೆಯಲ್ಲಿ ಭಾರತದಿಂದ ವಲಸೆ ಹೋಗಿರುವ ಕಾಶ್ಮೀರಿಗರಿಗೆ ಮೀಸಲಿರಿಸಿರುವ 12 ಸ್ಥಾನಗಳ ರದ್ದು, ಮತ್ತು ಪಿಒಕೆಯ ಜಲವಿದ್ಯುತ್ ಯೋಜನೆಗಳಿಗೆ ರಾಯಲ್ಟಿ ಕೊನೆಗೊಳಿಸುವುದು, ತೆರಿಗೆ ರಿಯಾಯಿತಿ, ಸಬ್ಸಿಡಿ ದರದಲ್ಲಿ ಗೋಧಿ ಹಿಟ್ಟು ಹಾಗೂ ವಿದ್ಯುತ್ ವಿತರಣೆ ಮುಂತಾದ ಬೇಡಿಕೆಗಳನ್ನು ಇರಿಸಲಾಗಿದೆ.