ಏಷ್ಯನ್ ಈಜು: ರಾಜ್ಯದ ಧಿನಿಧಿ ದೇಸಿಂಘುಗೆ ಚಿನ್ನದ ಪದಕ
ಬೆಂಗಳೂರು: ಕರ್ನಾಟಕದ ಒಲಿಂಪಿಯನ್ ಈಜು ತಾರೆ ಧಿನಿಧಿ ದೇಸಿಂಘು ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ 12ನೇ ಏಷ್ಯನ್ ಏಜ್ ಗ್ರೂಪ್ ಈಜು ಚಾಂಪಿಯನ್ಷಿಪ್ನಲ್ಲಿ (ASIAN AGE GROUP CHAMPIONSHIP) ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ರಾಜ್ಯದ ಇತರ ಈಜುಪಟುಗಳಾದ ಶರಣ್ ಶ್ರೀಧರ ಮತ್ತು ತನಿಷಿ ಗುಪ್ತಾ ಕಂಚಿನ ಪದಕ ಒಲಿಸಿಕೊಂಡರು.
ಧಿನಿಧಿ ಶನಿವಾರ ನಡೆದ ಬಾಲಕಿಯರ 200 ಮೀ. ಫ್ರೀಸ್ಟೈಲ್ ವಿಭಾಗದ ಬಿ ಗುಂಪಿನಲ್ಲಿ 2 ನಿಮಿಷ, 1.81 ಸೆಕೆಂಡ್ಗಳಲ್ಲಿ ಈಜುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಶರಣ್ ಶ್ರೀಧರ 200 ಮೀ. ಫ್ರೀಸ್ಟೈಲ್ ಬಾಲಕರ ಬಿ ಗ್ರೂಪ್ನಲ್ಲಿ 1 ನಿಮಿಷ, 55.09 ಸೆಕೆಂಡ್ಗಳಲ್ಲಿ ಈಜಿ ಕಂಚು ಜಯಿಸಿದರು. ಎ ಗ್ರೂಪ್ನಲ್ಲಿ ರಾಜ್ಯದ ದರ್ಶನ್ ಎಸ್. 4ನೇ ಸ್ಥಾನದೊಂದಿಗೆ ಪದಕ ವಂಚಿತರಾದರು.
ತನಿಷಿ ಗುಪ್ತಾ ಬಾಲಕಿಯರ 50 ಮೀ. ಬಟರ್ಫ್ಲೈ ವಿಭಾಗದ ಎ ಗ್ರೂಪ್ನಲ್ಲಿ 27.91 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಕಂಚಿನ ಪದಕ ಗೆದ್ದುಕೊಂಡರು. ಮಿಶ್ರ 4/100 ಮೀ. ಫ್ರೀಸ್ಟೈಲ್ ವಿಭಾಗದ ಬಿ ಗ್ರೂಪ್ನಲ್ಲಿ ಅಕ್ಷಜ್ ಠಾಕುರಿಯಾ, ತನಿಷಿ ಗುಪ್ತಾ, ಧಿನಿಧಿ ದೇಸಿಂಘು ಮತ್ತು ಸಮರ್ಥ್ ಗೌಡ ಒಳಗೊಂಡ ಭಾರತ ತಂಡ ಕಂಚಿನ ಪದಕ ಜಯಿಸಿತು.