ನ್ಯೂಸ್

11ರಂದು ಮಹಿಳಾ ಸ್ವ ಸಹಾಯ ಸಂಘಗಳ ಸಮಾವೇಶ

ಹಾಸನ: ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಫೆ.11ರಂದು ಶಿಕಾರಿಪುರದಲ್ಲಿ ರಾಜ್ಯ ಮಟ್ಟದ ಮಹಿಳಾ ಸ್ವ ಸಹಾಯ ಸಂಘಗಳ ಸಮಾವೇಶ ಹಾಗೂ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಆಡಳಿತ ಸಮಿತಿ ಸದಸ್ಯ ಈರಣ್ಣಯ್ಯ ತಿಳಿಸಿದರು.
ಈ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಂದೇ ಇತ್ತು. ಇದೀಗ ಶ್ರೀ ಪುಷ್ಪಗಿರಿ ಮಹಿಳಾ ಸ್ವ ಸಹಾಯ ಸಂಘಗಳು ಕೂಡ ಸ್ಥಾಪಿತವಾಗಿದ್ದು ಮಹಿಳೆಯರನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢವಾಗಿಸುವ ಸಲುವಾಗಿ ಸಂಘಗಳನ್ನು ಸ್ಥಾಪನೆ ಮಾಡಲಾಗಿದೆ ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಠದ ಅಭಿವೃದ್ಧಿಯ ಜತೆಗೆ ಮಹಿಳಾ ಹಾಗೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ರೈತರಿಗೆ ನೆರವಾಗಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಠದ ಆಡಳಿತಾಧಿಕಾರಿ ಪುಷ್ಪಗಿರಿ ಕಿಟ್ಟಪ್ಪ ಮಾತನಾಡಿ, ಮಹಿಳಾ ಸ್ವ ಸಹಾಯ ಸಂಘದಲ್ಲಿ ಪ್ರತಿ ಸಂಘಕ್ಕೆ 20 ಜನರಂತೆ ಸುಮಾರು 2000 ಸಂಘಗಳಿವೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸಹಕಾರದೊಂದಿಗೆ ಸಂಘಗಳು ಉತ್ತಮವಾಗಿ ನಡೆಯುತ್ತಿದ್ದು, ಸ್ವ ಸಹಾಯ ಸಂಘಗಳ ಬಲವರ್ಧನೆ ಹಾಗೂ ಶಕ್ತಿ ತುಂಬುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಪುಷ್ಪಗಿರಿ ಮಠ ಕೂಡ ಕೆಲಸ ಮಾಡುತ್ತಿದೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ , ವಿಜಯ್ ಕುಮಾರ್, ಯಶೋಧರಾ, ಅಜಿತ್, ಸತೀಶ್ ಇತರರು ಉಪಸ್ಥಿತರಿದ್ದರು.