Canara Bank Marathon 
ನ್ಯೂಸ್

ಕೆನರಾ ಬ್ಯಾಂಕ್ ಮ್ಯಾರಥಾನ್‌ನಲ್ಲಿ 11,286 ಮಂದಿ ಭಾಗಿ - Canara Bank Marathon

ಮ್ಯಾರಥಾನ್‌ನಲ್ಲಿ 3 ಕಿ.ಮೀ. ಕ್ಯಾನ್ ಚಾರ್ಜ್ ರನ್, 5 ಕಿ.ಮೀ. ಕ್ಯಾನ್ ಚಾಲೆಂಜ್ ರನ್ ಹಾಗೂ 10 ಕಿ.ಮೀ. ಕ್ಯಾನ್ ಕಾನ್‌ಕರ್ ರನ್ ಸೇರಿ 3 ವಿಭಾಗಗಳನ್ನು ಆಯೋಜಿಸಲಾಗಿತ್ತು. 10 ಕಿ.ಮೀ. ವಿಭಾಗದ ಪುರುಷ ಮತ್ತು ಮಹಿಳಾ ವಿಭಾಗಗಳ ಪ್ರಥಮ ಸ್ಥಾನ ಪಡೆದವರಿಗೆ ತಲಾ 2 ಲಕ್ಷ ರೂ. ನಗದು ಬಹುಮಾನ ನೀಡಲಾಯಿತು.

ಬೆಂಗಳೂರು: (Canara Bank Marathon) ಆರೋಗ್ಯಕರ ಜೀವನಶೈಲಿ, ದೈಹಿಕ ಕ್ಷಮತೆ ಹಾಗೂ ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸುವ ಉದ್ದೇಶದಿಂದ ಕೆನರಾ ಬ್ಯಾಂಕ್, ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 4ನೇ ಆವೃತ್ತಿಯ ಮ್ಯಾರಥಾನ್‌ನಲ್ಲಿ ಬರೋಬ್ಬರಿ 11,286 ಮಂದಿ ಭಾಗವಹಿಸುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದರು.

ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬ್ರಜೇಶ್ ಕುಮಾರ್ ಸಿಂಗ್, ಬ್ಯಾಂಕಿನ ಹಿರಿಯ ಅಧಿಕಾರಿಗಳು ಮತ್ತು ಗಣ್ಯರ ಸಮ್ಮುಖದಲ್ಲಿ ಮ್ಯಾರಥಾನ್‌ಗೆ ಚಾಲನೆ ನೀಡಿದರು. ಭಾರತೀಯ ಓಟಗಾರ್ತಿ ಮತ್ತು ಏಷ್ಯನ್ಸ್ ಗೇಮ್ಸ್ ಸ್ಪರ್ಧೆಯ ಚಿನ್ನದ ಪದಕ ವಿಜೇತೆ ಎಂ.ಆರ್. ಪೂವಮ್ಮ ಉಪಸ್ಥಿತರಿದ್ದರು. ಈ ವರ್ಷದ ಮ್ಯಾರಥಾನ್‌ಗೆ ಅಸೋಸಿಯೇಷನ್ ಆಫ್ ಇಂಟರ್‌ನ್ಯಾಷನಲ್ ಮ್ಯಾರಥಾನ್ಸ್ ಅಂಡ್ ಡಿಸ್ಟೆನ್ಸ್ ರೇಸಸ್ ಸಂಸ್ಥೆಯ ಪ್ರಮಾಣೀಕರಣ ದೊರೆತಿರುವುದು ವಿಶೇಷ.

ಮ್ಯಾರಥಾನ್‌ನಲ್ಲಿ 3 ಕಿ.ಮೀ. ಕ್ಯಾನ್ ಚಾರ್ಜ್ ರನ್, 5 ಕಿ.ಮೀ. ಕ್ಯಾನ್ ಚಾಲೆಂಜ್ ರನ್ ಹಾಗೂ 10 ಕಿ.ಮೀ. ಕ್ಯಾನ್ ಕಾನ್‌ಕರ್ ರನ್ ಸೇರಿ 3 ವಿಭಾಗಗಳನ್ನು ಆಯೋಜಿಸಲಾಗಿತ್ತು. 10 ಕಿ.ಮೀ. ವಿಭಾಗದ ಪುರುಷ ಮತ್ತು ಮಹಿಳಾ ವಿಭಾಗಗಳ ಪ್ರಥಮ ಸ್ಥಾನ ಪಡೆದವರಿಗೆ ತಲಾ 2 ಲಕ್ಷ ರೂ. ನಗದು ಬಹುಮಾನ ನೀಡಲಾಯಿತು.

ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ 1 ಲಕ್ಷ ರೂ. ಹಾಗೂ 50 ಸಾವಿರ ರೂ. ಬಹುಮಾನ ನೀಡಲಾಯಿತು. 5 ಕಿ.ಮೀ. ವಿಭಾಗದ ವಿಜೇತರಿಗೆ ಕ್ರಮವಾಗಿ 1 ಲಕ್ಷ ರೂ., 50 ಸಾವಿರ ರೂ. ಹಾಗೂ 25 ಸಾವಿರ ರೂ. ಬಹುಮಾನ ವಿತರಿಸಲಾಯಿತು.