ಯುಎಸ್ಎ: ಶುಕ್ರವಾರ ಬೆಳಗ್ಗೆ ದಕ್ಷಿಣ ಕ್ಯಾಲಿಫೋರ್ನಿಯಾದ ಬ್ಯೂನಾ ಪಾರ್ಕ್‌ನಲ್ಲಿರುವ ವಾಣಿಜ್ಯ ಕಟ್ಟಡದಲ್ಲಿ ಅಮೋನಿಯಾ ಸೋರಿಕೆಯಾದ ನಂತರ ಹನ್ನೊಂದು ಜನರ ಸ್ಥಿತಿ ಗಂಭೀರವಾಗಿದೆ. ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೆಂಜ್ ಕೌಂಟಿ ಅಗ್ನಿಶಾಮಕ ಪ್ರಾಧಿಕಾರದ ಅಧಿಕಾರಿಗಳು ಬ್ಯೂನಾ ಪಾರ್ಕ್‌ನಲ್ಲಿರುವ ವಾಣಿಜ್ಯ ಕಟ್ಟಡದಲ್ಲಿ 9:15 ಕ್ಕೆ ಸ್ವಲ್ಪ ಮೊದಲು ಅಮೋನಿಯಾ ಸೋರಿಕೆ ವರದಿಯಾಗಿದೆ ಎಂದು ಹೇಳಿದ್ದಾರೆ.
ಸೋರಿಕೆ ಬಗ್ಗೆ ಮಾಹಿತಿ ಬಂದ ಕೂಡಲೇ ಕಟ್ಟಡವನ್ನು ತೆರವು ಮಾಡಲಾಗಿದೆ ಎಂದು ಅಗ್ನಿಶಾಮಕ ದಳ ತಿಳಿಸಿದೆ. ಅಮೋನಿಯಾ ಸೋರಿಕೆಯಿಂದಾಗಿ ಸುಮಾರು 23 ಜನರು ಗಾಯಗೊಂಡಿದ್ದಾರೆ. ಇದರಲ್ಲಿ 12 ಜನರ ಸ್ಥಿತಿ ಸಾಮಾನ್ಯವಾಗಿದ್ದು, 11 ಜನರ ಸ್ಥಿತಿ ಚಿಂತಾಜನಕವಾಗಿದೆ. ಇವರು ಚಿಕಿತ್ಸೆ ಪಡೆಯುತ್ತಿದ್ದು, ಘಟನೆಯ ನಂತರ ನಮ್ಮ ತಂಡವು ರಾಸಾಯನಿಕವನ್ನು ಪತ್ತೆಹಚ್ಚಿದಾಗ ಅದು ಅಮೋನಿಯಾ ಎಂದು ಕಂಡುಬಂದಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಗಾಳಿಯಲ್ಲಿ ಹೆಚ್ಚಿನ ಮಟ್ಟದ ಅಮೋನಿಯಕ್ಕೆ ಒಡ್ಡಿಕೊಳ್ಳುವುದರಿಂದ ಚರ್ಮ, ಕಣ್ಣು, ಗಂಟಲು ಮತ್ತು ಶ್ವಾಸಕೋಶಗಳಿಗೆ ಕಿರಿಕಿರಿಯುಂಟುಮಾಡುತ್ತದೆ ಮತ್ತು ತೀವ್ರ ಕೆಮ್ಮು ಉಂಟಾಗುತ್ತದೆ. ಸೋರಿಕೆಗೆ ಕಾರಣದ ಬಗ್ಗೆ ಸದ್ಯಕ್ಕೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲ.