ನ್ಯೂಸ್

ವಿಧಾನ ಪರಿಷತ್‌ಗೆ 11 ಅಭ್ಯರ್ಥಿಗಳು ಅವಿರೋಧ ಆಯ್ಕೆ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 11 ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಉಳಿದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಗುರುವಾರ ಪ್ರಕಟಿಸಿದ್ದಾರೆ. ನಾಮಪತ್ರ ಹಿಂಪಡೆಯುವ ಅವಧಿ ಮುಗಿಯುತ್ತಿದ್ದಂತೆ ಚುನಾವಣಾ ಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್‌ನ ಏಳು, ಬಿಜೆಪಿಯ ಮೂವರು ಹಾಗೂ ಜೆಡಿಎಸ್ ಒಬ್ಬ ಅಭ್ಯರ್ಥಿ ವಿಧಾನ ಪರಿಷತ್ ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್‌ನಿಂದ ಐವಾನ್ ಡಿಸೋಜಾ, ಕೆ.ಗೋವಿಂದರಾಜ್, ಜಗದೇವ ಗುತ್ತೇದಾರ್, ಬಲ್ಕೀಸ್ ಬಾನು, ಎನ್.ಎಸ್.ಬೋಸರಾಜು, ಡಾ.ಯತೀಂದ್ರ ಸಿದ್ದರಾಮಯ್ಯ, ಎ.ವಸಂತಕುಮಾರ್, ಬಿಜೆಪಿಯಿಂದ ಮಾರುತಿರಾವ್ ಮುಳೆ, ಎನ್.ರವಿಕುಮಾರ್, ಸಿ.ಟಿ.ರವಿ ಹಾಗೂ ಜೆಡಿಎಸ್‌ನಿಂದ ಟಿ.ಎನ್.ಜವರಾಯಿಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದ್ದಾರೆ.

ಮರು ಆಯ್ಕೆ ಅದೃಷ್ಟ

ಕಾಂಗ್ರೆಸ್‌ನ ಕೆ.ಗೋವಿಂದರಾಜ್ ಮೂರನೇ ಬಾರಿ, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಪರಿಷತ್‌ನ ಪ್ರತಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಮರು ಆಯ್ಕೆಯಾದ ಅದೃಷ್ಟವಂತರು.

ಕಾಂಗ್ರೆಸ್‌ನ ಐವಾನ್ ಡಿಸೋಜಾ ಒಂದು ಅವಧಿ ಗ್ಯಾಪ್‌ನ ಮತ್ತೊಮ್ಮೆ ವಿಧಾನ ಪರಿಷತ್‌ಗೆ ಪ್ರವೇಶಿಸಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ತಂದೆಗಾಗಿ ಸ್ಥಾನ ತೆರವುಗೊಳಿಸಿದ್ದ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ, ವಿಧಾನಸಭೆ ಚುನಾವಣೆಯಲ್ಲಿ ಸೋತ ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ, ಮಾಜಿ ಶಾಸಕ ಮಾರುತಿರಾವ್ ಮುಳೆ ಸೇರಿ ಏಳು ಜನ ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.