ನ್ಯೂಸ್

ಇಂಡೋ-ಚೀನಾ ಗಡಿಯಲ್ಲಿ ಹೇಸರಗತ್ತೆ ಮೇಲೆ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಚಿನ್ನ ವಶಕ್ಕೆ; ಮೂವರ ಬಂಧನ

ನವದೆಹಲಿ: ಇಂಡೋ-ಚೀನಾ ಗಡಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ತಲಾ 1 ಕೆ.ಜಿ. ತೂಕದ 108 ಚಿನ್ನದ ಗಟ್ಟಿಗಳನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ವಶಪಡಿಸಿಕೊಂಡಿದೆ. ಈ ಪ್ರಕರಣ ಸಂಬಂಧ ಮೂರವನ್ನು ಬಂಧಿಸಲಾಗಿದೆ ಎಂದು ಗಡಿ ರಕ್ಷಣಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಲಗರ್​ಗಳ ಬಳಿಯಿಂದ ಎರಡು ಮೊಬೈಲ್ ಫೋನ್‌ಗಳು, ಒಂದು ಬೈನಾಕ್ಯುಲರ್, ಎರಡು ಚಾಕುಗಳು ಮತ್ತು ಕೇಕ್ ಮತ್ತು ಹಾಲಿನಂತಹ ಹಲವಾರು ಚೈನೀಸ್ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. "ಇತಿಹಾಸದಲ್ಲಿ ಐಟಿಬಿಪಿ ಗಡಿಯಲ್ಲಿ ವಶಪಡಿಸಿಕೊಂಡ ಅತಿದೊಡ್ಡ ಚಿನ್ನವಾಗಿದೆ. ಜಪ್ತಿಯಾದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈಶಾನ್ಯ ಲಡಾಖ್​ನ ಚಂಗ್‌ತಂಗ್​ ಉಪವಲಯದ ಚಿಸ್ಬುಲೆ, ನರ್ಬುಲಾ, ಝಂಗ್ಲೆ ಮತ್ತು ಝಕ್ಲಾ ಪ್ರದೇಶಗಳಲ್ಲಿ ಅಕ್ರಮ ಸಾಗಾಟಗಾರರ ಹಾವಳಿ ಹೆಚ್ಚಾಗಿರುವುದರಿಂದ ಈ ವಲಯದದಲ್ಲಿ ಮಂಗಳವಾರ ಮಧ್ಯಾಹ್ನದಿಂದ ಐಟಿಬಿಪಿಎ 21ನೇ ಬೆಟಾಲಿಯನ್​ ತೀವ್ರ ಶೋಧ ಕೈಗೊಂಡಿತ್ತು. ನಿಯಂತ್ರಣ ರೇಖೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಶ್ರೀರಾಪ್ಲೆ ಬಳಿ ಕಳ್ಳಸಾಗಣೆಯ ಖಚಿತ ಮಾಹಿತಿ ಐಟಿಬಿಪಿಗೆ ಸಿಕ್ಕಿತ್ತು. ಗಸ್ತು ಪಡೆಯ ನೇತೃತ್ವದ ವಹಿಸಿರುವ ಡೆಪ್ಯೂಟಿ ಕಮಾಂಡೆಂಟ್ ದೀಪಕ್ ಭಟ್, ಇಬ್ಬರು ವ್ಯಕ್ತಿಗಳು ಹೇಸರಗತ್ತೆ ಪ್ರಯಾಣಿಸುತ್ತಿರುವುದನ್ನು ಗುರುತಿಸಿದ್ದಾರೆ.

ಆರಂಭದಲ್ಲಿ ಅವರು ತಾವು ಔಷಧೀಯ ಸಸ್ಯಗಳ ವಿತರಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ಬಳಿಕ ಶೋಧ ನಡೆಸಿದಾಗ ಅಪಾರ ಪ್ರಮಾಣದ ಚಿನ್ನ ಮತ್ತು ಇತರ ವಸ್ತುಗಳು ಪತ್ತೆಯಾಗಿವೆ. ಈ ವೇಳೆ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಆದರೆ ಬೆನ್ನಟ್ಟಿದ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.  ಬಂಧಿತರನ್ನು ಲಡಾಖ್‌ನ ನ್ಯೋಮಾ ಪ್ರದೇಶದ ನಿವಾಸಿಗಳಾದ ತ್ಸೆರಿಂಗ್ ಚಂಬಾ (40) ಮತ್ತು ಸ್ಟಾಂಜಿನ್ ಡೋರ್ಗ್ಯಾಲ್ ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬರನ್ನು ಬಂಧಿಸಲಾಗಿದೆ.