ನ್ಯೂಸ್

ಕಾಬುಲ್​ನಿಂದ ಸುರಕ್ಷಿತವಾಗಿ ದೆಹಲಿ ತಲುಪಿದ 107 ಭಾರತೀಯರು; ಮುಂದುವರಿದ ತೆರವು ಕಾರ್ಯಾಚರಣೆ

ನವದೆಹಲಿ: ಭಾರತೀಯ ವಾಯುಪಡೆಯ ವಿಶೇಷ ವಿಮಾನವೊಂದು ಇಂದು ಬೆಳಿಗ್ಗೆ 107 ಭಾರತೀಯರೂ ಸೇರಿದಂತೆ 168 ಜನರನ್ನು ಅಫ್ಘಾನಿಸ್ತಾನದಿಂದ ಹೊತ್ತುತಂದಿದ್ದು, ದೆಹಲಿ ಬಳಿಯ ಹಿಂದೋನ್​ ಏರ್​ ಬೇಸ್​ನಲ್ಲಿ ಇಳಿದಿದೆ. ಹೀಗೆ ಆಗಮಿಸಿರುವ ಯಾತ್ರಿಗಳಿಗೆ ಕರೊನಾದ ಆರ್​ಟಿಪಿಸಿಆರ್​ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಎಎನ್​​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದರೊಂದಿಗೆ ಏರ್​ ಇಂಡಿಯ, ಇಂಡಿಗೋ ಮತ್ತು ವಿಸ್ತಾರ ಏರ್​ಲೈನ್​ಗಳ ಮೂರು ಇತರ ವಿಮಾನಗಳೂ ಕಾಬುಲ್​ನಿಂದ ತೆರವುಗೊಳಿಸಲ್ಪಟ್ಟ ಭಾರತೀಯರನ್ನು ತಜಿಕಿಸ್ತಾನದ ರಾಜಧಾನಿ ದುಶಾನ್ಬೆ ಮತ್ತು ಖತಾರ್​​ನ ದೋಹಾದಿಂದ ಹೊತ್ತುತಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್​ ಬಾಗ್ಚಿ, ಆಗಿಂದಾಗ್ಗೆ ಟ್ವಿಟರ್​ನಲ್ಲಿ ತೆರವು ಕಾರ್ಯಾಚರಣೆಯ ಫೋಟೋ, ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ. ಶನಿವಾರದಂದು 87 ಭಾರತೀಯರು ಮತ್ತು ಇಬ್ಬರು ನೇಪಾಳೀಯರನ್ನು ಐಎಎಫ್​ ವಿಮಾನವು ಕಾಬುಲ್​ನಿಂದ ಭಾರತಕ್ಕೆ ಕರೆದುತಂದಿತ್ತು. ಈ ವಿಮಾನದ ಪ್ರಯಾಣಿಕರು 'ಭಾರತ​ಮಾತಾ ಕಿ ಜೈ' ಎಂದು ಘೊಷಣೆ ಕೂಗುತ್ತಿರುವ ವಿಡಿಯೋ ತುಣುಕನ್ನು ಕಾಣಬಹುದು. (ಏಜೆನ್ಸೀಸ್)