ನ್ಯೂಸ್

ಯಾರು ಹೇಳಿದ್ದು ಕರೊನಾದಿಂದ ವೃದ್ಧರು ಪಾರಾಗೋದಿಲ್ಲ ಅಂತ? 105 ವರ್ಷದ ಅಜ್ಜಿಯ ಆತ್ಮಸ್ಥೈರ್ಯ ಸೋಂಕನ್ನೇ ಹೆದರಿಸಿದೆ !

ತಿರುವನಂತಪುರಂ: ಕರೊನಾ ವೈರಸ್​ ಬಗ್ಗೆ ಅದೆಷ್ಟೋ ಮಿಥ್ಯಗಳು ಹುಟ್ಟಿಕೊಂಡಿವೆ. ಅದರಲ್ಲಿ ಒಂದು ವಯಸ್ಸಾದವರಿಗೆ ಈ ಸೋಂಕು ತಗುಲಿದರೆ ಬದುಕುವುದೇ ಇಲ್ಲ ಎಂಬುದು. ಆದರೆ ಜಗತ್ತಿನ ಅನೇಕ ಕಡೆಗಳಲ್ಲಿ, ಭಾರತದಲ್ಲೂ ಕೆಲವು ವೃದ್ಧರು ಕರೊನಾವನ್ನು ಯಶಸ್ವಿಯಾಗಿ ಮಣಿಸಿದ ಉದಾಹರಣೆಗಳು ಸಿಗುತ್ತಿವೆ. ಇದನ್ನೂ ಓದಿ: ‘ಯಾರಾದರೂ ಸತ್ತರೆ ನಿಮಗೆ ಅವರ ಬೆಡ್​…ಅಲ್ಲಿಯವರೆಗೂ ನೆಲದ ಮೇಲೆ ಮಲಗಿ’

ಇದೀಗ ಆ ಸಾಲಿಗೆ ಸೇರಿದವರು ಕೇರಳದ ಆಸ್ಮಾ ಬೀವಿ ಎಂಬ 105 ವರ್ಷದ ವೃದ್ಧೆ. ಕರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಕೊವಿಡ್​ನಿಂದ ಪಾರಾದ ಕೇರಳದ ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

ಬೀವಿ ಅವರು ಕೊಲ್ಲಂನಲ್ಲಿರುವ ಇಎಸ್​ಐ ಸರ್ಕಾರಿ ಮೆಡಿಕಲ್​ ಕಾಲೇಜಿಗೆ ದಾಖಲಾಗಿದ್ದರು. 105 ವರ್ಷದ ಇವರಿಗೆ ಮಗಳಿಂದಲೇ ಕರೊನಾ ಸೋಂಕು ತಗುಲಿತ್ತು. ಇವರೇನೂ ಸುಲಭದಲ್ಲಿ ಕರೊನಾವನ್ನು ಮಣಿಸಲಿಲ್ಲ. ಒಂದೆರಡು ಬಾರಿ ಆರೋಗ್ಯ ತೀರ ಹದಗೆಟ್ಟಿತ್ತು. ಆದರೆ ಮತ್ತೆ ಸುಧಾರಿಸಿಕೊಂಡು, ಇದೀಗ ಆರೋಗ್ಯದಿಂದ ಹಿಂದಿರುಗಿದ್ದಾರೆಂದು ಆಸ್ಪತ್ರೆ ತಿಳಿಸಿದೆ. (ಏಜೆನ್ಸೀಸ್)