ಯಾದಗಿರಿ: ಜಿಲ್ಲೆಯಲ್ಲಿ ಮೊದಲನೇ ಹಂತದ ಗ್ರಾಪಂ ಚುನಾವಣೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಜಿಲ್ಲಾಡಳಿತ ಇದೀಗ ಭಾನುವಾರದ ಯಾದಗಿರಿ, ಗುರುಮಠಕಲ್ ಹಾಗೂ ವಡಿಗೇರಾ ತಾಲೂಕಿನ ಗ್ರಾಪಂ ಚುನಾವಣೆ ಮತದಾನಕ್ಕೆ ಎಲ್ಲ ರೀತಿಯ ಸಿದ್ಧತೆ ಪೂರ್ಣಗೊಳಿಸಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್., ತಿಳಿಸಿದ್ದಾರೆ.
2ನೇ ಹಂತದಲ್ಲಿ ಮೂರು ತಾಲೂಕಿನ 56 ಪಂಚಾಯಿತಿಗಳಿಗೆ ಮತದಾನ ನಡೆಯಲಿದ್ದು, ಇದರಲ್ಲಿ ಯಾದಗಿರಿ 22, ಗುರುಮಠಕಲ್ 17 ಹಾಗೂ ವಡಗೇರಾ ತಾಲೂಕಿನ 17 ಗ್ರಾಪಂಗಳು ಒಳಗೊಂಡಿವೆ. ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರಿಗೆ ಮತದಾನ ನಡೆಯಲಿದೆ. ಇನ್ನೂ ಯಾದಗಿರಿ 360 ಸ್ಥಾನಗಳಿಗೆ 858 ಅಭ್ಯರ್ಥಿಗಳು, ಗುರುಮಠಕಲ್ನ 234 ಸ್ಥಾನಗಳಿಗೆ 581 ಅಭ್ಯರ್ಥಿಗಳು, ಹಾಗೂ ವಡಗೇರಾದಲ್ಲಿ 243 ಸ್ಥಾನಗಳಿಗೆ 631 ಅಭ್ಯರ್ಥಿಗಳು, ಅಂತಿಮವಾಗಿ ಕಣದಲ್ಲಿದ್ದಾರೆ.
ಅದರಂತೆ ಎರಡನೇ ಹಂತದಲ್ಲಿ ಜಿಲ್ಲೆಯಲ್ಲಿ ಒಟ್ಟು 1,58,359 ಪುರುಷ ಮತದಾರರು, 1,58,920 ಮಹಿಳಾ ಮತದಾರರು ಹಾಗೂ 06 ಜನ ಇತರೆ ಮತದಾರರನ್ನೊಳಗೊಂಡಂತೆ ಒಟ್ಟು 3,17,285 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಇದಕ್ಕಾಗಿ ಒಟ್ಟು 443 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 1978 ಮತಗಟ್ಟೆ ಸಿಬ್ಬಂದಿಗಳನ್ನು ಚುನಾವಣೆಗೆ ನಿಯೋಜಿಸಲಾಗಿದೆ. ಶನಿವಾರ ಯಾದಗಿರಿ ತಾಲೂಕಿಗೆ ಸಂಬಂಧಿಸಿದಂತೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಗುರುಮಠಕಲ್ ಪಟ್ಟಣದ ಸರ್ಕಾರಿ ಪದವಿ ಕಾಲೇಜು ಹಾಗೂ ವಡಗೇರಾ ತಾಲೂಕಿಗೆ ಸಂಬಂಧಿಸಿದಂತೆ ವಡಗೇರಾದ ಸರ್ಕಾರಿ ಪ್ರೌಢ ಶಾಲೆಯ ಹೊಸ ಕಟ್ಟಡದಲ್ಲಿ ಮಸ್ಟರಿಂಗ್ ಮತ್ತು ಮತದಾನ ಮುಕ್ತಾಯವಾದ ನಂತರ ಡಿ-ಮಸ್ಟರಿಂಗ್ ಪ್ರಕ್ರಿಯೆಗಳು ನಡೆಯಲಿವೆ. ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸಲು ಮೂರು ತಾಲೂಕುಗಳಲ್ಲಿ 33 ಕ್ಷಿಪ್ರ ಸಂಚಾರಿ ದಳ ಹಾಗೂ ಸೆಕ್ಟರ್ ಆಫೀಸರ್ಸ್ಗಳ ತಂಡಗಳನ್ನು ರಚಿಸಲಾಗಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ಮಾಡಲು ಆರೋಗ್ಯ ಇಲಾಖೆಯಿಂದ ಯಾದಗಿರಿ ತಾಲೂಕಿಗೆ 199, ಗುರುಮಠಕಲ್ 133 ಮತ್ತು ವಡಿಗೇರಾ111 ಒಟ್ಟು 443 ಸಿಬ್ಬಂದಿಯವರನ್ನು ನಿಯೋಜಿಸಲಾಗಿದೆ. ಮತಗಟ್ಟೆ ಅಧಿಕಾರಿಗಳಿಗೆ ಕೋವಿಡ್-19 ಕಿಟ್ಗಳನ್ನು ನೀಡಲಾಗಿದೆ.ಇನ್ನೂ ಕರೊನಾ ಸೋಂಕಿತ ಮತದಾರರು ಇದ್ದಲ್ಲಿ ಮತದಾನ ಮುಕ್ತಾಯವಾಗುವ ಕೊನೆಯ ಒಂದು ಗಂಟೆ ಅವಧಿಯಲ್ಲಿ ಮತಗಟ್ಟೆಗೆ ಬಂದು ಮತಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.