ನ್ಯೂಸ್

ಹೆರಿಗೆ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆಗೆ ದಾಖಲಾಗಿದ್ದ ಕೊರೊನಾ ಪೀಡಿತ 100 ವರ್ಷದ ವೃದ್ಧ ಸಂಪೂರ್ಣ ಗುಣಮುಖ..!

ಚೀನಾದ ವುಹಾನ್​ ಪ್ರಾಂತ್ಯದಲ್ಲಿ 100 ವರ್ಷದ ವೃದ್ಧನೋರ್ವ ಮಾರಣಾಂತಿಕ ಕೊರೊನಾ ವೈರಸ್​ನ್ನು ಗೆದ್ದು ಈಗ ಪೂರ್ತಿಯಾಗಿ ಗುಣಮುಖರಾಗಿದ್ದಾರೆ.

ಹುಬೈನ ಹೆರಿಗೆ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆಯಲ್ಲಿ ವೃದ್ಧನಿಗೆ ಫೆ.24ರಿಂದಲೂ ಚಿಕಿತ್ಸೆ ನೀಡಲಾಗುತ್ತಿತ್ತು. ಮಾ.7ರಂದು ಅವರ ರಕ್ತದ ಮಾದರಿಯನ್ನೊಮ್ಮೆ ಪರೀಕ್ಷೆ ಮಾಡಿದಾಗ ಸೋಂಕು ಸಂಪೂರ್ಣ ನಾಶವಾಗಿದ್ದು ಬೆಳಕಿಗೆ ಬಂದಿದೆ.

ವೃದ್ಧನನ್ನು ವುಹಾನ್ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಮಾಡಲಾಗಿದೆ. ಕೊರೊನಾ ವೈರಸ್​ ಗೆದ್ದ ಈ ಹಿರಿಯ ಜೀವಕ್ಕೆ ಇರುವ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ನೆನಪುಗಳು ನಾಶವಾಗುವ ಅಲ್​ಝೈಮರ್​ ಕಾಯಿಲೆ ಇದೆ. ಅಧಿಕ ರಕ್ತದೊತ್ತಡವಷ್ಟೇ ಅಲ್ಲ, ಹೃದಯ ಸಂಬಂಧಿ ರೋಗದಿಂದಲೂ ಅವರು ಬಳಲುತ್ತಿದ್ದಾರೆ. ಇಷ್ಟೆಲ್ಲ ಇದ್ದು ಕೂಡ ಕೊರೊನಾದಿಂದ ಪಾರಾಗಿದ್ದು ತುಂಬ ಅಚ್ಚರಿಯ ಸಂಗತಿ ಎಂದು ವೈದ್ಯರು ಹೇಳಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ವೃದ್ಧನಿಗೆ ಸುಮಾರು 13 ದಿನಗಳ ಕಾಲ ವಿವಿಧ ಚಿಕಿತ್ಸೆ, ಥೆರಪಿಗಳನ್ನು ನೀಡಲಾಗಿತ್ತು. ಆ್ಯಂಟಿ ವೈರಲ್​ ಔಷಧಗಳನ್ನು ಇಂಜೆಕ್ಟ್​ ಮಾಡುವ ಜತೆಗೆ ಪ್ಲಾಸ್ಮಾ ವರ್ಗಾವಣೆಗೊಳಿಸಲಾಗಿತ್ತು. ಎಲ್ಲದರ ಪರಿಣಾಮವಾಗಿ ಅವರಿಂದು ಚೇತರಿಸಿಕೊಂಡಿದ್ದಾರೆ.

ಚೀನಾದ ವುಹಾನ್​ನಲ್ಲೇ ಅತ್ಯಂತ ಹೆಚ್ಚು ಜನರು ಕೊರೊನಾ ಪೀಡಿತರಾಗಿದ್ದಾರೆ. ಸದ್ಯ ಚೀನಾದಲ್ಲಿ 62,278 ಜನರು ಕೊರೊನಾದಿಂದ ಪಾರಾಗಿದ್ದು, ಇನ್ನೂ 58,600 ಮಂದಿ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ಕೆಲವೇ ಮಂದಿಯಲ್ಲಿ ಕೊರೊನಾ ಸೋಂಕು ಒಮ್ಮೆ ಗುಣಮುಖವಾಗಿ ಮತ್ತೊಮ್ಮೆ ಕಾಣಿಸಿಕೊಂಡಿದ್ದೂ ಇದೆ. (ಏಜೆನ್ಸೀಸ್​)