ನ್ಯೂಸ್

100ಕ್ಕೂ ಹೆಚ್ಚು ತಾಲೂಕು ಬರ ಪೀಡಿತ: ಸೆಪ್ಟಂಬರ್ ಮೊದಲ ವಾರ ಘೋಷಣೆ: ಚಲುವರಾಯಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ಮಳೆ ಅಭಾವದಿಂದ 100ಕ್ಕೂ ಹೆಚ್ಚು ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಸೆಪ್ಟಂಬರ್ ಮೊದಲ ವಾರ ೋಷಣೆ ಮಾಡಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಸನ್ನಿವೇಶ ಪರಿಸ್ಥಿತಿ ಇದ್ದು, ವಾಸ್ತವಿಕ ಅಧ್ಯಯನದ ಬಳಿಕ ಬರ ತಾಲೂಕುಗಳನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಶೇ. 79 ರಷ್ಟು ಬಿತ್ತನೆಯಾಗಿದೆ. ಆದರೆ ಮಳೆ ಕೊರತೆಯಿಂದ ಒಣಗಿ ಹೋಗುತ್ತಿದ್ದು, ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ವಾರದ ಒಳಗೆ ಮಳೆ ಬಂದರೆ ಶೇ. 50 ರಿಂದ 60 ರಷ್ಟು ಬೆಳೆ ಉಳಿಯಬಹುದು. ಹವಾಮಾನ ಮುನ್ಸೂಚನೆ ಪ್ರಕಾರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮಳೆಯ ಅನಿಶ್ಚಿತತೆ ಇದೆ. ಹೀಗಾಗಿ ಬಿತ್ತನೆ ಮಾಡಿದ ಬೆಳೆ ಕೈಗೆ ಬರುವ ನಿರೀಕ್ಷೆಗಳಿಲ್ಲ ಎಂದು ಹೇಳಿದರು.

4 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆಯ ಕೊರತೆಯಾಗಿದೆ. ಇದರಲ್ಲಿ 2 ರಿಂದ 3 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗುವ ಸಾಧ್ಯತೆಯಿದೆ. ತೊಗರಿ 2.50 ಲಕ್ಷ ಹೆ., ಹೆಸರುಕಾಳು 2.22 ಲಕ್ಷ ಹೆ., ಹತ್ತಿ 1.43 ಲಕ್ಷ ಹೆ., ಶೇಂಗಾ 93 ಸಾವಿರ ಹೆ., ಸೂರ್ಯಕಾಂತಿ 71 ಸಾವಿರ ಹೆ. ಬಿತ್ತನೆಯಾಗಿಲ್ಲ ಎಂದು ತಿಳಿಸಿದರು.

ರಾಗಿ, ಭತ್ತ, ಸೂರ್ಯಕಾಂತಿ ಬಿತ್ತನೆಗೆ ಇನ್ನೂ ಸಮಯಾವಕಾಶ ಇದೆ. ರಾಗಿ ಸೆಪ್ಟೆಂಬರ್ 15 ರವರೆಗೂ ಬಿತ್ತನೆ ಮಾಡಬಹುದಾಗಿದ್ದು, ಈವರೆಗಿನ 3.5 ಲಕ್ಷ ಹೆ. ಬಿತ್ತನೆ ಆಗಿಲ್ಲ. ಈ ಪೈಕಿ ಬಹಳಷ್ಟು ಪ್ರದೇಶ ಬಿತ್ತನೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಶೇ. 60 ರಷ್ಟು ಮಳೆ ಕೊರತೆಯ ಮಾನದಂಡವನ್ನಷ್ಟೇ ಪರಿಗಣಿಸದೆ ಕ್ಷೇತ್ರ ಮಟ್ಟದಲ್ಲಿ ವಾಸ್ತವಿಕ ಅಧ್ಯಯನದ ಮೂಲಕ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರ ಆಧಾರದ ಮೇಲೆ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳ ಜಂಟಿ ಸಮಿತಿ ಪ್ರತಿ ತಾಲೂಕಿನಲ್ಲಿ ಕನಿಷ್ಟ 10 ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವಿಕ ಅಧ್ಯಯನ ನಡೆಸಿ ವರದು ಸಿದ್ಧಪಡಿಸಲಿದೆ. ಅದನ್ನು ಈ ತಿಂಗಳ 30ರೊಳಗಾಗಿ ಕೇಂದ್ರ ಸರ್ಕಾರಕ್ಕೆ ರವಾನೆ ಮಾಡಲಾಗುತ್ತಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ಉಪಸಮಿತಿ ಸಭೆ ನಡೆಸಿ ಬರ ಪರಿಸ್ಥಿತಿ ಘೋಷಣೆ ಮಾಡುವುದಾಗಿ ತಿಳಿಸಿದರು.

ಗದಗ, ಬಾಗಲಕೋಟೆ, ತುಮಕೂರು ಮತ್ತು ಬೆಳಗಾವಿ ಜಿಲ್ಲೆಯ 194 ಗ್ರಾಮ ಪಂಚಾಯಿತಿಗಳಲ್ಲಿ 35,284 ರೈತರಿಗೆ 35.95 ಕೋಟಿ ರೂ. ಬೆಳೆವಿಮೆ ಜೂನ್ 22 ರ ವೇಳೆಗೆ ಪಾವತಿ ಮಾಡಲಾಗಿದೆ. ದಾಖಲಾತಿಗಳ ಕೊರತೆ ಇರುವ ರೈತರಿಗೂ ವಿಮೆ ಪಾವತಿ ಮಾಡುವುದಾಗಿ ತಿಳಿಸಿದರು.

16 ಲಕ್ಷ ರೈತರ ನೋಂದಣಿ

ರಾಜ್ಯದಲ್ಲಿ ಪ್ರಧಾನಮಂತ್ರಿ ಪಸಲ್ ಭೀಮಾ ಯೋಜನೆಯಡಿ 16 ಲಕ್ಷ ನೋಂದಣಿಯಾಗಿದೆ. ಕಳೆದ ವರ್ಷ ಮಂಡ್ಯ ಜಿಲ್ಲೆ ಅತೀ ಹೆಚ್ಚು ವಿಮಾ ಸೌಲಭ್ಯವನ್ನು ರೈತರಿಗೆ ದೊರಕಿಸುವ ಮೂಲಕ ಕೇಂದ್ರ ಸರ್ಕಾರದಿಂದ ಪ್ರಶಂಸನಾ ಪತ್ರ ಪಡೆದುಕೊಂಡಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್ , ನಿರ್ದೇಶಕ ಡಾ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್ ಉಪಸ್ಥಿತರಿದ್ದರು.