Nato chief warns India : ರಷ್ಯಾದೊಂದಿಗೆ ವ್ಯವಹಾರ ಮುಂದುವರಿಸಿದರೆ ಭಾರೀ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಬ್ರೆಜಿಲ್, ಚೀನಾ ಮತ್ತು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೂಕ್ರೇನ್‌ಗೆ ಹೊಸ ಶಸ್ತ್ರಾಸ್ತ್ರಗಳನ್ನು ಕಳುಹಿಸುವ ಒಪ್ಪಂದವನ್ನು ಘೋಷಿಸಿದ ಮತ್ತು ರಷ್ಯಾದಿಂದ ಸರಕುಗಳನ್ನು ಖರೀದಿಸುವ ದೇಶಗಳ ಮೇಲೆ ಕಠಿಣ ಸುಂಕಗಳನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ ಒಂದು ದಿನದ ಬೆನ್ನಲ್ಲೇ ನ್ಯಾಟೋ ಮುಖ್ಯಸ್ಥರಿಂದ ಈ ಬೆದರಿಕೆ ಬಂದಿದೆ. ಬುಧವಾರ (ಜುಲೈ 16) ಅಮೆರಿಕದ ಸೆನೆಟರ್‌ಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಬಳಿಕ ರುಟ್ಟೆ ಈ ಹೇಳಿಕೆ ನೀಡಿದರು.
ನೀವು ಚೀನಾದ ಅಧ್ಯಕ್ಷರಾಗಿ, ಭಾರತದ ಪ್ರಧಾನಿಯಾಗಿ ಅಥವಾ ಬ್ರೆಜಿಲ್ ಅಧ್ಯಕ್ಷರಾಗಿ, ನೀವು ರಷ್ಯಾದೊಂದಿಗೆ ವ್ಯಾಪಾರ ಮಾಡುವುದನ್ನು ಮತ್ತು ಅವರಿಂದ ತೈಲ ಮತ್ತು ಅನಿಲವನ್ನು ಖರೀದಿಸುವುದನ್ನು ಮುಂದುವರಿಸಿದರೆ ಹಾಗೂ ಮಾಸ್ಕೋದಲ್ಲಿರುವ ವ್ಯಕ್ತಿ (ರಷ್ಯಾ ಅಧ್ಯಕ್ಷ) ಶಾಂತಿ ಮಾತುಕತೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ನಾನು 100 ರಷ್ಟು ದ್ವಿತೀಯ ನಿರ್ಬಂಧಗಳನ್ನು ವಿಧಿಸುತ್ತೇವೆ ಎಂದು ರುಟ್ಟೆ ಸುದ್ದಿಗಾರರಿಗೆ ತಿಳಿಸಿದರು.
ಈ ಮೂರು ದೇಶಗಳಿಗೆ ನನ್ನ ಸಲಹೆ ಏನೆಂದರೆ, ನೀವೀಗ ಬೀಜಿಂಗ್‌ನಲ್ಲಿ ಅಥವಾ ದೆಹಲಿಯಲ್ಲಿ ವಾಸಿಸುತ್ತಿದ್ದರೆ ಅಥವಾ ನೀವು ಬ್ರೆಜಿಲ್ ಅಧ್ಯಕ್ಷರಾಗಿದ್ದರೆ, ನೀವು ತಕ್ಷಣ ಇದನ್ನು ಪರಿಶೀಲಿಸಬಹುದು. ಇಲ್ಲದಿದ್ದರೆ, ನಿಮ್ಮ ಮೇಲೆ ತುಂಬಾ ಪರಿಣಾಮ ಬೀರಬಹುದು ಎಂದು ನ್ಯಾಟೋ ಮುಖ್ಯಸ್ಥರು ಹೇಳಿದರು. ಇದಿಷ್ಟೇ ಅಲ್ಲದೆ, ಶಾಂತಿ ಮಾತುಕತೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಒತ್ತಾಯಿಸುವಂತೆ ಈ ದೇಶಗಳ ನಾಯಕರನ್ನು ರುಟ್ಟೆ ಒತ್ತಾಯಿಸಿದರು.
ದಯವಿಟ್ಟು ವ್ಲಾಡಿಮಿರ್ ಪುಟಿನ್ ಅವರಿಗೆ ಫೋನ್ ಕರೆ ಮಾಡಿ ಶಾಂತಿ ಮಾತುಕತೆಗಳ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಹೇಳಿ, ಇಲ್ಲದಿದ್ದರೆ ಇದು ಬ್ರೆಜಿಲ್, ಭಾರತ ಮತ್ತು ಚೀನಾದ ಮೇಲೆ ಭಾರಿ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ ಎಂದರು.
ಅಂದಹಾಗೆ, ಯೂಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧದಿಂದಾಗಿ ರಷ್ಯಾವನ್ನು ಆರ್ಥಿಕವಾಗಿ ಪ್ರತ್ಯೇಕಿಸಲು ಅಮೆರಿಕ ಮತ್ತು ನ್ಯಾಟೋದಿಂದ ಹೆಚ್ಚುತ್ತಿರುವ ಒತ್ತಡದ ಮಧ್ಯೆ ರುಟ್ಟೆ ಅವರ ಈ ಎಚ್ಚರಿಕೆ ಬಂದಿದೆ. (ಏಜೆನ್ಸೀಸ್)