ಬೆಂಗಳೂರು: ಇಲ್ಲಿನ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಹೊಸದಾಗಿ 100 ಸೀಟುಗಳು ಲಭ್ಯವಿದ್ದು, ಇವುಗಳ ಹಂಚಿಕೆಗೆ ಸರ್ಕಾರವು ಆದೇಶಿಸಿರುವುದರಿಂದ ಈ ಕಾಲೇಜಿಗೆ ಮಾತ್ರ ಅನ್ವಯವಾಗುವಂತೆ ಹೊಸದಾಗಿ ಆಪ್ಷನ್ ಗಳನ್ನು ನಮೂದಿಸಲು ಅ.14ರ ರಾತ್ರಿ 11.59 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಅವರು ತಿಳಿಸಿದ್ದಾರೆ.
ಈಗಾಗಲೇ ಈ ಮುಂಚೆ ಬೇರೆ ಕಾಲೇಜುಗಳಲ್ಲಿ ಸೀಟು ಪಡೆದವರು ಹಾಗೂ ಈವರೆಗೆ ಹಂಚಿಕೆಯಾಗದವರು ಇವರಿಬ್ಬರೂ ಆಪ್ಷನ್ ಎಂಟ್ರಿ ಮಾಡುವ ಮೂಲಕ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವರ್ಗವಾರು ಸೀಟ್ ಮ್ಯಾಟ್ರಿಕ್ಸ್ ಅನ್ನು ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ. ಒಂದು ವೇಳೆ ಯಾವುದೇ ಅಭ್ಯರ್ಥಿಗೆ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆಯಾದಲ್ಲಿ ಅವರು ಮೊದಲಿನ ಸೀಟನ್ನು ಕಳೆದುಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ಈ ಹಿಂದಿನ ಸೀಟು ಪಡೆಯಲು ಸಾಧ್ಯವಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಶುಲ್ಕ ಪಾವತಿಸಿ ವೈದ್ಯಕೀಯ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸುತ್ತಿರುವ ಇತರೆ ಅಭ್ಯರ್ಥಿಗಳು ಸಹ ಕೆಂಪೇಗೌಡ ವೈದ್ಯಕೀಯ ಕಾಲೇಜಿನ ಸೀಟುಗಳಿಗೆ ಆಪ್ಷನ್ ಗಳನ್ನು ಅ.14ರ ರಾತ್ರಿ 11.59 ರವರೆಗೆ ನಮೂದಿಸಬಹುದು ಹಾಗೂ ಸೀಟು ಮ್ಯಾಟ್ರಿಕ್ಸ್ ನಲ್ಲಿ ತೋರಿಸದೆ ಇರುವ ಕಾಲೇಜುಗಳಿಗೂ ಸಹ ಆಪ್ಷನ್ ಗಳನ್ನು ದಾಖಲಿಸಲು ಅವಕಾಶವಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಸೀಟ್ ಮ್ಯಾಟ್ರಿಕ್ಸ್‌ನಲ್ಲಿ ಸೀಟುಗಳ ಲಭ್ಯತೆಯನ್ನು ತೋರಿಸದಿದ್ದರೂ ಅಭ್ಯರ್ಥಿಗಳಿಗೆ ಆದ್ಯತೆಗಳನ್ನು ನಮೂದಿಸಲು ಸಲಹೆ ನೀಡಲಾಗಿದೆ.
ಬ್ಯಾಂಕ್‌ಗಳ ರಜೆ ಕಾರಣದಿಂದ ವೈದ್ಯಕೀಯ ಮಾಪ್ ಅಪ್ ಸುತ್ತಿಗೆ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ ಪಾವತಿಸಲು ಅ. 14ರ ವರೆಗೆ ಕಾಲಾವದಿ ವಿಸ್ತರಿಸಲಾಗಿದೆ.