ಬೆಂಗಳೂರು: ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶದಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ಏಕೈಕ ಆರೋಪಿಯಿಂದ 1.45 ಕೋಟಿ ರೂ. ಮೌಲ್ಯದ 100 ಬೈಕ್‌ಗಳನ್ನು ಜಪ್ತಿ ಮಾಡಿದ ಮೊದಲ ಪ್ರಕರಣವಾಗಿದೆ.
ಆಂಧ್ರಪ್ರದೇಶದ ಚಿತ್ತೂರು ನಿವಾಸಿ ಪ್ರಸಾದ್ ಬಾಬು ಬಂಧಿತ. ಈತ ನೀಡಿದ ಮಾಹಿತಿ ಆಧರಿಸಿ 24 ಬುಲೆಟ್ ಬೈಕ್, 16 ಸುಜುಕಿ ಆಕ್ಸಿಸ್, 16 ಪಲ್ಸರ್ ಸೇರಿ ವಿವಿಧ ಕಂಪೆನಿಗಳ 1.45 ಕೋಟಿ ರೂ. ಮೌಲ್ಯದ 100 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು, ಕೋಲಾರ, ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಕಳ್ಳತನ ಮಾಡಿದ್ದ 51 ಪ್ರಕರಣಗಳನ್ನ ಬೇಧಿಸಲಾಗಿದ್ದು, 49 ದ್ವಿಚಕ್ರವಾಹನಗಳ ಮಾಲೀಕರ ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.
5ನೇ ತರಗತಿಗೆ ಓದು ಬಿಟ್ಟ ಪ್ರಸಾದ್ ಬಾಬು, ನೌಕರಿ ಅರಸಿಕೊಂಡು ಕೆ.ಆರ್.ಪುರಕ್ಕೆ ಬಂದು ಅಲ್ಲಿಯೇ ನೆಲೆಸಿ ಡ್ರೈವಿಂಗ್ ಮತ್ತು ಮೆಕಾನಿಕ್ ಕೆಲಸ ಮಾಡಿಕೊಂಡು ಕೆಲಕಾಲ ಜೀವನ ಸಾಗಿಸುತ್ತಿದ್ದ. ಈ ವೇಳೆ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮತ್ತು ವೈಯರ್ ಸಂಪರ್ಕ ಕಡಿತ ಮಾಡಿ ನೇರ ಆನ್ ಮಾಡುವ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದ. ಇದರ ನಡುವೆ ಸುಲಭವಾಗಿ ಹಣ ಸಂಪಾದನೆ ಮಾಡುವ ಸಲುವಾಗಿ 2022ರಲ್ಲಿ ವಾಹನ ಕಳವು ಕೃತ್ಯಕ್ಕೆ ಕೈ ಹಾಕಿದ್ದ.
ಮನೆ ಮುಂದೆ ನಿಲ್ಲಿಸಿರುವ ವಾಹನಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಪ್ರಸಾದ್ ಬಾಬು, ಪ್ರತಿ ದಿನ ಚಿತ್ತೂರಿನಿಂದ ಬಸ್‌ನಲ್ಲಿ ಪ್ರಯಾಣ ಬೆಳಸಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರಕ್ಕೆ ಬರುತ್ತಿದ್ದ. ಸಂಜೆ ವೇಳೆ ಎಲ್ಲೆಡೆ ಸುತ್ತಾಡಿ ಮನೆ ಮುಂದೆ ಅಥವಾ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿರುವ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕ್ಷಣಾರ್ಧದಲ್ಲಿ ಆನ್ ಮಾಡಿಕೊಂಡು ನೇರವಾಗಿ ಚಿತ್ತೂರಿಗೆ ಹೋಗುತ್ತಿದ್ದ. ಇಲ್ಲವಾದರೆ, ಬಂಗಾಲಪಾಳ್ಯದ ಜಾಮೀಯಾ ಮಸೀದಿಯ ಪಕ್ಕದ ಖಾಲಿ ಜಾಗದಲ್ಲಿ 33 ಬೈಕ್‌ಗಳನ್ನು ನಿಲ್ಲಿಸಿದ್ದ. ಕದ್ದ ಬೈಕ್‌ಗಳನ್ನು ಮೂವರು ಸೆಕೆಂಡ್ ಡೀಲರ್‌ಗಳಿಗೆ ಕೊಟ್ಟು ಅವರ ಕರೆಯಿಂದ ಮಾರಾಟ ಸಹ ಮಾಡಿದ್ದ.
ಜನವರಿ 10ರಂದು ಮನೆ ಮಂಭಾಗ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದ್ದ ಬಗ್ಗೆ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಬಿ.ರಾಮಮೂರ್ತಿ ನೇತೃತ್ವದ ತಂಡವು ತಾಂತ್ರಿಕ ಮಾಹಿತಿ ಕಲೆ ಹಾಕಿದ್ದರು. ಚಿತ್ತೂರು ಕಡೆಯಿಂದ ಆರೋಪಿ ಬರುತ್ತಾನೆ ಎಂಬ ಖಚಿತ ಮಾಹಿತಿ ಮೇರೆಗೆ ಹೊಸಕೋಟೆ ಟೋಲ್ ಬಳಿ ನಾಕಾಬಂದಿ ಹಾಕಿ ಪ್ರಸಾದ್ ಬಾಬುನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ.
ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ 100 ದ್ವಿಚಕ್ರ ವಾಹನ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಅಷ್ಟು ದ್ವಿಚಕ್ರ ವಾಹನಗಳನ್ನು ಮೂವರ ಮೂಲಕ ವಿಲೇವಾರಿ ಮಾಡುತ್ತಿದ್ದ. ಆ ಮೂವರನ್ನು ವಶಕ್ಕೆ ಪಡೆದಾಗ ಅರ್ಧ ಬೆಲೆಗೆ ಖರೀದಿ ಮಾಡಿದ್ದ ಗ್ರಾಹಕರನ್ನು ಪತ್ತೆಹಚ್ಚಿ ನೋಟಿಸ್ ಕೊಟ್ಟು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ದಯಾನಂದ್ ಮಾಹಿತಿ ನೀಡಿದ್ದಾರೆ.
ಪೊಲೀಸರಿಗೆ ಚಾಲೇಜ್ :
ವಾಟ್ಸ್‌ಆ್ಯಪ್ ಡಿಪಿಯಲ್ಲಿ ತೆಲುಗು ಸಿನಿಮಾದಲ್ಲಿ ನಾಯಕ ನಟ ಬೈಕ್‌ನಲ್ಲಿ ಸಾಗುತ್ತಿದ್ದಾಗ ಪೊಲೀಸರು ಹಿಡಿಯಲು ಹಿಂದಿನಿಂದ ಓಡಿ ಬರುತ್ತಿರುವ ಪೋಟೋ ಹಾಕಿ ತಾಕತ್ ಇದ್ದರೆ ಬಂಧಿಸುವಂತೆ ಸವಾಲು ಹಾಕಿದ್ದ. ಕದ್ದ ವಾಹನಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡಿ ಮೋಜು-ಮಸ್ತಿ ಮತ್ತು ಆನ್‌ಲೈನ್ ಜೂಜಾಟದಲ್ಲಿ ತೊಡಗುತ್ತಿದ್ದ.
ಇಷ್ಟವಾದ ವಾಹನ ಕದಿಯುತ್ತಿದ್ದ :
ವಾಹನ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಪ್ರಸಾದ್ ತನಗೆ ಇಷ್ಟವಾದ ದ್ವಿಚಕ್ರ ವಾಹನಗಳನ್ನೇ ಕದಿಯುತ್ತಿದ್ದ. ನೀಲಿ ಬಣ್ಣದ ಸುಜುಕಿ ಆಕ್ಸಿಸ್, ಆರ್ಮಿ ಬಣ್ಣದ ಬುಲೆಟ್, ಗ್ರೇ ಕಲರ್ ರೆಡ್ ಕಲರ್ ಪಲ್ಸರ್‌ಗಳನ್ನು ಕಳವು ಮಾಡುತ್ತಿದ್ದ. ಕೆ.ಆರ್.ಪುರ ಠಾಣಾ ವ್ಯಾಪ್ತಿಯಲ್ಲಿ 23 ಬೈಕ್‌ಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.