ನವ ದೆಹಲಿ: ಉಡಾನ್ ಯೋಜನೆಯಲ್ಲಿ 2024ರ ವೇಳೆಗೆ ದೇಶದಲ್ಲಿ 100 ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ತಿಳಿಸಿದ್ದಾರೆ.
ರಾಷ್ಟೀಯ ಮೂಲಸೌಕರ್ಯ ಯೋಜನೆ (ಎನ್ಐಪಿ) ಭಾಗವಾಗಿ ಪ್ರಾದೇಶಿಕವಾಗಿ ವಾಯುಯಾನ ಸಂಪರ್ಕಗಳಿಲ್ಲದ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವುದು ಇದರ ಉದ್ದೇಶವಾಗಿದೆ. 2023-24ರ ವೇಳೆಗೆ ಸುಮಾರು 1,300 ವಿಮಾನಗಳನ್ನು ದೇಶದೊಳಗಿನ ವಾಯುಮಾರ್ಗಗಳಲ್ಲಿ ಸಂಚರಿಸುವ ಗುರಿ ಹೊಂದಿದೆ. ಹಿಂದಿನ ಬಜೆಟ್ನಲ್ಲಿ ಭಾರತವನ್ನು ವಿಮಾನಯಾನ ಸೇವೆಯ ಪ್ರಮುಖ ಕೇಂದ್ರವಾಗಿ ಬದಲಿಸಲು ಕ್ರಮಗಳನ್ನು ತೆಗದುಕೊಳ್ಳಲಾಗುತ್ತದೆ ಎಂದು ಘೋಷಿಸಲಾಗಿತ್ತು.
ಶ್ರೀಸಾಮಾನ್ಯರಿಗೂ ವಾಯುಯಾನ ಸೇವೆಯನ್ನು ಒದಗಿಸಲು ಹಾಗೂ ದೇಶೀಯ ವಾಯುಯಾನವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ 2016ರಲ್ಲಿ ಕೇಂದ್ರ ಸರ್ಕಾರ ಉಡಾನ್ ಯೋಜನೆಯನ್ನು ಜಾರಿ ಮಾಡಿತ್ತು. ಪ್ರಸ್ತುತ ಪ್ರಾದೇಶಿಕ ಸಂಪರ್ಕ ಯೋಜನೆಯಲ್ಲಿ 232 ವಾಯು ಮಾರ್ಗಗಳಿಂದ 43 ನಗರಗಳನ್ನು 132 ಪಟ್ಟಣಗಳ ನಡುವೆ ವಾಯುಯಾನ ಆರಂಭಿಸಲಾಗಿದೆ. ಸದ್ಯ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ದೇಶದಲ್ಲಿ 11 ಅಂತಾರಾಷ್ಟ್ರೀಯ ನಿಲ್ದಾಣಗಳು ಸೇರಿದಂತೆ 125 ನಿಲ್ದಾಣಗಳನ್ನು ನಿರ್ವಹಣೆ ಮಾಡುತ್ತಿದೆ.