ಮಳೆಗಾಲದಲ್ಲಿ ಮಹಿಳೆಯರಿಗೆ ತಲೆಗೂದಲಿನ ಆರೈಕೆ ಕೊಂಚ ಸವಾಲೇ ಸರಿ. ಮಳೆಗಾಲದಲ್ಲಿ ತಂಪು ವಾತಾವರಣದಿಂದಾಗಿ ಕೂದಲು ಉದುರುವಿಕೆ, ಜಿಡ್ಡುಗಟ್ಟುವುದು, ತಲೆಹೊಟ್ಟು ಮುಂತಾದ ಸಮಸ್ಯೆಗಳು ಹೆಚ್ಚಾಗುತ್ತವೆ. ಹೀಗೆ ವಾತಾವರಣದ ಶುಷ್ಕತೆಯಿಂದಾಗಿ ಕೂದಲು ಒಣಗಿ ಸುಕ್ಕುಗಟ್ಟಿದಂತಾಗಿ ಕಳಾಹೀನವಾಗುತ್ತದೆ. ಇದರ ಜತೆಗೆ ಕೂದಲಿಗೆ ಸಂಬಂಧಿಸಿದ ವಿವಿಧ ಉತ್ಪನ್ನಗಳು, ಸ್ಟೈಲಿಶಿಂಗ್ ಜೆಲ್‌ಗಳು ಮತ್ತು ಹೇರ್ ಡ್ರೈಯರ್‌ಗಳ ಅತಿ ಬಳಕೆಯೂ ಕೂದಲ ಡ್ಯಾಮೇಜ್‌ಗೆ ಮುಖ್ಯ ಕಾರಣಗಳು.
ಈ ರೀತಿ ಕಾಂತಿ ಕಳೆದುಕೊಂಡ ಕೂದಲನ್ನು ನಯವಾಗಿ, ಮೃದುವಾಗಿ, ಹೊಳೆಯುವಂತೆ ಮಾಡಲು ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ.
1. ವಿನೆಗರ್‌ನಿಂದ ಕೂದಲ ಪೋಷಣೆ: ಕೂದಲ ಪೋಷಣೆ ಅಸಮರ್ಪಕವಾಗಿದ್ದರೆ ಕೂದಲಿನ ಎಳೆಗಳು ಛಿದ್ರಗೊಂಡು, ಒಣಗಿದಂತಾಗಿ ಸುಕ್ಕುಗಟ್ಟುತ್ತವೆ. ಇದರಿಂದಾಗಿ ಕೂದಲಿನ ಹೊರ ಪೊರೆ ಒರಟಾಗಿ ಕಾಣುತ್ತದೆ. ಹೀಗಾದಾಗ ಆಪಲ್ ಸೈಡರ್ ವಿನೆಗರ್ ಅನ್ನು ನೀರಿನೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿ, ನೆನೆಯಲು ಬಿಟ್ಟು ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಇದರಿಂದ ಕೂದಲಿನ ಎಳೆಗಳಿಗೆ ಆರೈಕೆ ಸಿಕ್ಕಂತಾಗಿ ಮೆದುವಾಗಿ ನಯವಾಗಿ ಕಂಗೊಳಿಸುತ್ತವೆ.
2. ನಿಮ್ಮ ಶಾಂಪೂ ಮತ್ತು ಕಂಡೀಷನರ್‌ಗಳ ಬಗ್ಗೆ ತಿಳಿದುಕೊಳ್ಳಿ: ನಿಮ್ಮ ಕೂದಲಿಗೆ ದಿನನಿತ್ಯ ಬಳಸುವ ಶಾಂಪೂ ಮತ್ತು ಕಂಡೀಷನರ್‌ಗಳಲ್ಲಿ ಪಿಎಚ್ (ಆಮ್ಲ ಮತ್ತು ಕ್ಷಾರದ ಪ್ರಮಾಣ) ಸಮತೋಲಿತವಾಗಿದೆಯೇ ಎಂದು ಪರೀಕ್ಷಿಸಬೇಕು. ಇಲ್ಲದಿದ್ದಲ್ಲಿ ಇದು ಕೂದಲು ಉದುರುವಿಕೆಗೆ ಮುಖ್ಯ ಕಾರಣ. ಶಾಂಪೂಗಳಲ್ಲಿನ ಪಿಎಚ್‌ನ ಸಮ ಪ್ರಮಾಣವು ಕೂದಲಿಗೆ ಪೋಷಣೆ ನೀಡಿ ಆರೋಗ್ಯವಾಗಿರುವಂತೆ ಕಾಪಾಡುತ್ತದೆ. ಈ ರಾಸಾಯನಿಕಗಳನ್ನು ಹೊರತು ಪಡಿಸಿ ನೈಸರ್ಗಿಕವಾಗಿಯೂ ಕೂದಲಿಗೆ ಕಂಡೀಷನಿಂಗ್ ಮಾಡಬಹುದು. ಅವುಗಳೆಂದರೆ ಹುಳಿ ಮೊಸರು, ಆಮ್ಲಾ ಪುಡಿ, ದಾಸವಾಳದ ಎಲೆ, ಹೂ ಅಥವಾ ಪುಡಿ, ಮೆಂತ್ಯ ಪುಡಿಗಳ ಮಿಶ್ರಣವನ್ನು ಹಚ್ಚುವುದರ ಮೂಲಕ ಕೂದಲನ್ನು ನಯವಾಗಿ ಹೊಳೆಯುವಂತೆ ಮಾಡಬಹುದು.
3. ತಣ್ಣನೆಯ ನೀರಿನಿಂದ ಕೂದಲು ತೊಳೆಯಬೇಕು: ಬಹುಪಾಲು ತಜ್ಞರು, ತಣ್ಣೀರಿನಿಂದ ಕೂದಲು ತೊಳೆಯಬೇಕೆಂದು ಶಿಫಾರಸು ಮಾಡುತ್ತಾರೆ. ಏಕೆಂದರೆ ತಣ್ಣನೆಯ ನೀರು ಕೂದಲಿನ ಹೊರಪೊರೆಯನ್ನು ಮುಚ್ಚುವುದಲ್ಲದೆ, ಕೂದಲಿನ ಆರೋಗ್ಯಕರ ಪೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತಣ್ಣೀರಿನ ಬಳಕೆಯಿಂದ ಕೂದಲಿನ ತೇವಾಂಶ ಉಳಿಯುವುದಲ್ಲದೆ, ಅದರ ಶಕ್ತಿ ಮತ್ತು ಹೊಳಪನ್ನು ಹೆಚ್ಚಿಸುತ್ತದೆ.
4. ಮಾಯಿಶ್ಚ್‌ರೈಸ್ ಕಾಪಾಡಿಕೊಳ್ಳಬೇಕು: ಒಣ ಹಾಗೂ ಹಾನಿಗೊಳಗಾದ ಕೂದಲು ಹೆಚ್ಚು ರಂಧ್ರಗಳಿಂದ ಕೂಡಿರುತ್ತದೆ. ಇಂತಹ ಕೂದಲು ತೇವಾಂಶವನ್ನು ಹೀರಿಕೊಂಡು, ಹೊರಪೊರೆಗಳನ್ನು ಹೆಚ್ಚಿಸಿ, ಕೂದಲು ಉದುರುವಂತೆ ಮಾಡುತ್ತದೆ. ಮಾನ್ಸೂನ್ ಋತುವಿನಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಇದನ್ನು ತಡೆಯಲು ಒಂದು ಉಪಾಯವಿದೆ. ಸ್ನಾನಕ್ಕೆ ಹೋಗುವ ಮೊದಲು ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು. ಇದು ಕೂದಲು ತೇವಾಂಶ ಕಳೆದುಕೊಳ್ಳದಂತೆ ಕಾಪಾಡುತ್ತದೆ. ಹೀಗೆ ಮಾಯಿಶ್ಚರೈಸ್ ಮಾಡುವುದರಿಂದ ಕೂದಲಿನ ಮೇಲ್ಮೈ ಪದರವನ್ನು ಕಾಪಾಡುವುದಲ್ಲದೆ, ಕೂದಲಿನ ಹೊರಪೊರೆ ಮತ್ತು ಪರಿಸರದ ನಡುವೆ ಸಮರ್ಥ ತಡೆಗೋಡೆಯನ್ನು ನಿರ್ಮಿಸುತ್ತದೆ. ಹೇರ್ ಮಾಸ್ಕ್‌ಗಳ ನಿಯಮಿತ ಬಳಕೆಯಿಂದ ಕೂದಲು ಒಣಗಿ, ಸುಕ್ಕುಗಟ್ಟುವುದನ್ನು ಕೂಡ ಇದರಿಂದ ತಡೆಯಬಹುದು.
5. ಆರೋಗ್ಯಕರ ಆಹಾರ ಪದ್ಧತಿ: ಪ್ರೊಟೀನ್ ಭರಿತ ಹೆಸರು ಕಾಳು ಮತ್ತು ವಾಲ್‌ನಟ್, ಬಾದಾಮಿ, ತೆಂಗಿನಕಾಯಿ, ಅವಕಾಡೊ, ತುಪ್ಪ ಹೀಗೆ ಕೊಬ್ಬು ಭರಿತ ಪದಾರ್ಥಗಳನ್ನು ಆರೋಗ್ಯಕರ ಪ್ರಮಾಣದಲ್ಲಿ ಸೇವಿಸುವುದರಿಂದ ಕೂದಲು ದಟ್ಟವಾಗಿ, ಬಲವಾಗಿ ಮತ್ತು ನಯವಾಗಿ ಬೆಳೆಯಲು ಸಹಾಯವಾಗುತ್ತದೆ.
6. ಕೂದಲಿಗೆ ಮೊಟ್ಟೆಯ ಮಾಸ್ಕ್: ಮೊಟ್ಟೆಗಳು ಪ್ರೊಟೀನ್‌ನ ಉತ್ತಮ ಮೂಲವಾಗಿದೆ. ಇದು ಕೂದಲನ್ನು ಬಲಪಡಿಸುವುದರ ಜತೆಗೆ ದೇಹದ ಆರೋಗ್ಯಕ್ಕೂ ಪ್ರಯೋಜನಕಾರಿ. ಮೊಟ್ಟೆಯಲ್ಲಿ ಪ್ರೊಟೀನ್ ಜತೆಗೆ ಹಲವು ಜೀವಸತ್ವಗಳು ಮತ್ತು ಖನಿಜಗಳಿದ್ದು, ಕೂದಲಿನ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ಒಂದು ಮೊಟ್ಟೆಗೆ ಒಂದು ಚಮಚ ಆಲಿವ್ ಎಣ್ಣೆಯನ್ನು ಮಿಶ್ರ ಮಾಡಿ ಕೂದಲಿಗೆ ಹಚ್ಚಬೇಕು. ಇದು ಹಾನಿಗೊಳಗಾದ ಕೂದಲಿಗೆ ಕ್ಷಿಪ್ರ ಪೋಷಣೆ ನೀಡಿ, ಉತ್ತಮ ವಿನ್ಯಾಸ ನೀಡುತ್ತದೆ.
ಕೂದಲು ಒಣಗದಂತೆ ತಡೆಯಲು ಇನ್ನಷ್ಟು ಸಲಹೆಗಳು
1. ಆಲ್ಕೋಹಾಲ್ ಅಂಶವಿರುವ ಉತ್ಪನ್ನಗಳನ್ನು ಬಳಸದಿರುವುದೇ ಸೂಕ್ತ.
2. ಒಣ ಕೂದಲನ್ನು ಪದೇ ಪದೇ ಬಾಚುವುದನ್ನು ತಪ್ಪಿಸಿ. ಅದರಲ್ಲೂ ಕೂದಲು ಸುಕ್ಕುಗಟ್ಟಿದಾಗ ಎಣ್ಣೆ ಹಚ್ಚಿ ನಯವಾಗಿ ಬಾಚಿ ಸುಕ್ಕು ಬಿಡಿಸಬೇಕು.
3. ಹೇರ್‌ಡ್ರೈಯರ್‌ಗಳ ಬಳಕೆಯನ್ನು ಸಾಧ್ಯವಾದಷ್ಟೂ ತಪ್ಪಿಸಬೇಕು.
4. ಕೂದಲು ಒರೆಸಿಕೊಳ್ಳಲು ಟವಲ್‌ಗಳಿಗೆ ಬದಲಾಗಿ ಮೃದುವಾದ ಹತ್ತಿ ಬಟ್ಟೆಯನ್ನು ಬಳಸಬೇಕು.