ನ್ಯೂಸ್

ಜೆಡಿಎಸ್ ಸಂಘಟನೆಗೆ 10 ತಂಡ ರಚನೆ: ಪಕ್ಷ ಪುನಃಶ್ಚೇತನಕ್ಕೆ ತಂತ್ರ

Bengaluru - Political - Vilas Melagiri

ಬೆಂಗಳೂರು: ಬಿಜೆಪಿ ಜತೆಗಿನ ಮೈತ್ರಿ, ಶಾಸಕರಲ್ಲಿ ಅತೃಪ್ತಿ, ಕೆಲವು ಶಾಸಕರು ಕಾಂಗ್ರೆಸ್, ಮತ್ತೆ ಹಲವು ಶಾಸಕರು ಬಿಜೆಪಿಗೆ ಹೋಗುತ್ತಾರೆಂಬ ಗಾಳಿ ಸುದ್ದಿಗಳ ನಡುವೆ ಜೆಡಿಎಸ್ ಪಕ್ಷ ಸಂಘಟನೆಗೆ ಸಜ್ಜಾಗುತ್ತಿದೆ. ಶಾಸಕರನ್ನು ಹಿಡಿದಿಟ್ಟುಕೊಳ್ಳುವುದರ ಜತೆಗೆ ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಬಲವರ್ಧನೆಗೆ ತಂತ್ರ ರೂಪಿಸಲಾಗುತ್ತಿದೆ.

ಬಿಜೆಪಿ ಜತೆಗಿನ ಕುಮಾರಸ್ವಾಮಿ ಸಖ್ಯ ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರಲ್ಲಿ ಹಲವು ಅನುಮಾನ ಮೂಡಿಸಿವೆ. ಹೀಗಾಗಿ ಮಾಜಿ ಪ್ರಧಾನಿ ದೇವೇಗೌಡರು ಖುದ್ದು ಅಖಾಡಕ್ಕಿಳಿದು ಶಾಸಕಾಂಗ ಪಕ್ಷದ ಸಭೆ ಕರೆದು ಮಾರ್ಗದರ್ಶನ ಮಾಡಿದ್ದಾರೆ. ಜೆಡಿಎಸ್ ಪಕ್ಷ ಇಂಡಿಯಾ ಅಥವಾ ಎನ್‌ಡಿಎ ಮೈತ್ರಿ ಕೂಟಗಳನ್ನು ಸೇರುವುದಿಲ್ಲ ಎಂದು ಖಂಡತುಂಡವಾಗಿ ಹೇಳುವ ಮೂಲಕ ಅಂತರ ಕಾಯ್ದುಕೊಳ್ಳುವ ಸಂದೇಶವನ್ನು ಸಾರಿದ್ದಾರೆ. ಇನ್ನೊಂದೆಡೆ ಕುಮಾರಸ್ವಾಮಿ ನಡೆಗೂ ಲಕ್ಷ್ಮಣ ರೇಖೆ ಎಳೆದಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ. ಶಕ್ತಿ ಇರುವ ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಹೇಳುವ ಮೂಲಕ ದೇವೇಗೌಡರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಅಡಕತ್ತರಿಗೆ ಸಿಲುಕಿಸಿದ್ದಾರೆ.

ಹೋರಾಟಕ್ಕೆ 10 ತಂಡ ರಚನೆ:

ಜೆಡಿಎಸ್ ಬಲಪಡಿಸಲು 10 ತಂಡ ರಚನೆಗೆ ಜೆಡಿಎಸ್ ಕಾರ್ಯತಂತ್ರ ರೂಪಿಸಿದೆ. ಪಕ್ಷದ ಶಾಸಕರು, ಹಿರಿಯ ನಾಯಕರ ನೇತೃತ್ವದಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡುವ ಮೂಲಕ ತಳ ಮಟ್ಟದ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ.

ಶೀಘ್ರದಲ್ಲೇ ದೇವೇಗೌಡರು ಮತ್ತೊಂದು ಸಭೆ ಕರೆದು ಹೋರಾಟದ ರೂಪುರೇಷೆ ಕುರಿತು ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳಿಗೆ ತಿಳಿಸಿ ಟಾಸ್ಕ್ ಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲೆಗೆ ತಂಡಗಳು ಭೇಟಿ:

10 ನಾಯಕರ ನೇತೃತ್ವದಲ್ಲಿ ರಚಿಸಲಾಗುವ ತಂಡಗಳು ಎಲ್ಲ ಜಿಲ್ಲೆಗೆ ಭೇಟಿ ನೀಡಿ ಪಕ್ಷದ ಸಮಸ್ಯೆಗಳನ್ನು ಆಲಿಸಲಿವೆ. ಪಕ್ಷದ ನಾನಾ ಹಂತದ ಪದಾಧಿಕಾರಿಗಳ ನೇಮಕ, ಯುವ ನೇತಾರರಿಗೆ ಹೋರಾಟದ ನೇತೃತ್ವ, ಹಿರಿಯ ನಾಯಕರಿಗೆ ಪಕ್ಷದ ಸಂಘಟನೆಯ ಜವಾಬ್ದಾರಿಯನ್ನು ಕೂಡ ನಿಗದಿಪಡಿಸಲು ನಿರ್ಧರಿಸಲಾಗಿದೆ.

ಶುಕ್ರವಾರ ಕುಮಾರಸ್ವಾಮಿ ವಾಪಸ್:

ವಿದೇಶ ಪ್ರವಾಸದಲ್ಲಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಆ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಮಾಡಿರುವ ಸರ್ಕಾರ ಉರುಳಿಸುವ ತಂತ್ರಕ್ಕೆ ಉತ್ತರ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಂಗಪುರದಲ್ಲಿ ಕುಳಿತು ಕುಮಾರಸ್ವಾಮಿ ಸರ್ಕಾರ ಉರುಳಿಸುವ ಸಂಚು ರೂಪಿಸುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದರು.