ನ್ಯೂಸ್

ರಾಜ್ಯಾದ್ಯಂತ 10 ಲಕ್ಷ ನಕಲಿ ಬಿಪಿಎಲ್ ಕಾರ್ಡ್: ಮಾಹಿತಿ ನೀಡಿ 400 ರೂ.ಬಹುಮಾನ ಪಡೆಯಿರಿ

| ಬೇಲೂರು ಹರೀಶ ಬೆಂಗಳೂರು

ಬಡವರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಜಾರಿಗೆ ತಂದಿರುವ ಬಿಪಿಎಲ್ ಕಾರ್ಡ್ ಹಾಗೂ ಅದರ ಪ್ರಯೋಜನ ಉಳ್ಳವರ ಪಾಲಾಗುತ್ತಿದೆ. ಹಣವಂತರು ನಕಲಿ ದಾಖಲೆಗಳನ್ನು ನೀಡಿ ಅಂದಾಜು 10 ಲಕ್ಷ ಬಿಪಿಎಲ್ ಕಾರ್ಡ್​ಗಳನ್ನು ಪಡೆದಿರುವ ಬಗ್ಗೆ ಆಹಾರ ಇಲಾಖೆ ಮಾಹಿತಿ ಕಲೆಹಾಕಿದೆ. ಮಾ. 31ರೊಳಗೆ ಇಂಥ ಕಾರ್ಡ್​ಗಳನ್ನು ಸ್ವಯಂ ಪ್ರೇರಿತವಾಗಿ ವಾಪಸ್ ನೀಡದಿದ್ದರೆ, ಇಲಾಖೆ ಅಧಿಕಾರಿಗಳೇ ಕಾರ್ಯಾಚರಣೆ ನಡೆಸಿ ಅಕ್ರಮ ಎಸಗಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಿದ್ದಾರೆ.

ಸರ್ಕಾರಿ ಅನುದಾನ ಪಡೆಯುತ್ತಿರುವ ಸಿಬ್ಬಂದಿ, ಸರ್ಕಾರಿ ಸ್ವಾಮ್ಯದ ಸಂಸ್ಥೆ, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಯ ಅಧಿಕಾರಿಗಳು, ಸರ್ಕಾರಿ ನೌಕರರು, ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ಕ್ಕಿಂತ ಹೆಚ್ಚು ಒಣ ಅಥವಾ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು, ನಗರ ಪ್ರದೇಶಗಳಲ್ಲಿ ಒಂದು ಸಾವಿರ ಚ.ಅಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮನೆ ಹೊಂದಿರುವವರು, ನಾಲ್ಕು ಚಕ್ರದ ವಾಹನ ಇರುವ ಹಾಗೂ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ.ಕ್ಕಿಂತ ಹೆಚ್ಚಿರುವ ಕುಟುಂಬಗಳು ಅನಧಿಕೃತವಾಗಿ ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ಇಲಾಖೆ ಪತ್ತೆ ಹಚ್ಚಿದೆ.

4.98 ಕೋಟಿ ಸದಸ್ಯರು

ರಾಜ್ಯದಲ್ಲಿ 7,62,628 ಅಂತ್ಯೋದಯ, 20,07601 ಎಪಿಎಲ್ ಹಾಗೂ 1,18,87,236 ಬಿಪಿಎಲ್ ಕಾರ್ಡ್​ಗಳಿವೆ. ಈ ಎಲ್ಲ ಕಾರ್ಡ್​ಗಳಿಂದ ಸೇರಿ ಒಟ್ಟು 4,98,09351 ಕುಟುಂಬದ ಸದಸ್ಯರಿದ್ದಾರೆ. ಕೇಂದ್ರದ ಸಹಕಾರದೊಂದಿಗೆ ಸರ್ಕಾರ ಪ್ರಸ್ತುತ ಪ್ರತಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಸದಸ್ಯನಿಗೆ ಉಚಿತವಾಗಿ 5 ಕೆಜಿ ಅಕ್ಕಿ ಹಾಗೂ ಪ್ರತಿ ಕಾರ್ಡ್​ಗೆ 2 ಕೆಜಿ ಗೋಧಿ ನೀಡುತ್ತಿದೆ. ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೆ ಉಚಿತವಾಗಿ 35 ಕೆಜಿ ಅಕ್ಕಿ ಹಾಗೂ ಎಪಿಎಲ್ ಕಾರ್ಡ್ ಇರುವ ಪ್ರತಿ ಸದಸ್ಯನಿಗೆ 15 ರೂ.ನಂತೆ 10 ಕೆಜಿ ಅಕ್ಕಿ ನೀಡಲಾಗುತ್ತಿದೆ.

12.47 ಲಕ್ಷ ಕಾರ್ಡ್ ರದ್ದು

ಕಳೆದ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ ನಕಲಿ ದಾಖಲೆಗಳನ್ನು ನೀಡಿ ಅಕ್ರಮವಾಗಿ ಪಡೆದಿದ್ದ 12,47,151 ರೇಷನ್ ಕಾರ್ಡ್​ಗಳನ್ನು ಆಹಾರ ಇಲಾಖೆ ರದ್ದುಗೊಳಿಸಿದೆ. 2018ರಲ್ಲಿ 1,97,925, 2019ರಲ್ಲಿ 9,19,040 ಹಾಗೂ 2020ರಲ್ಲಿ 1,30,186 ಸೇರಿ ಒಟ್ಟು 12,47,151 ಕಾರ್ಡ್​ಗಳನ್ನು ರದ್ದುಗೊಳಿಸಿದೆ. ಇದರಲ್ಲಿ 9,301 ಅಂತ್ಯೋದಯ, 10,18,963 ಬಿಪಿಎಲ್ ಹಾಗೂ 2,18,887 ಎಪಿಎಲ್ ಕಾರ್ಡ್​ಗಳಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ಹೊರೆಯಾಗಿತ್ತು.

ಎಲ್ಲೆಲ್ಲಿ ರದ್ದು?

ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಕಾರ್ಡ್​ಗಳು ರದ್ದುಗೊಂಡರೆ ದಕ್ಷಿಣ ಕನ್ನಡ, ಚಿತ್ರದುರ್ಗ, ವಿಜಯಪುರ ಹಾಗೂ ಮೈಸೂರಿನಲ್ಲಿ ಸರಾಸರಿ ಒಂದು ಲಕ್ಷ ಕಾರ್ಡ್​ಗಳು ರದ್ದುಗೊಂಡಿವೆ. ಬಾಗಲಕೋಟೆ, ಬಳ್ಳಾರಿ, ಬೀದರ್, ಬೆಂ.ಗ್ರಾಮಾಂತರ, ಚಿಕ್ಕಮಗಳೂರು, ದಾವಣಗೆರೆ ಮಂಡ್ಯ, ಹಾಸನ ಮತ್ತು ತುಮಕೂರು ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಸರಾಸರಿ 50 ಸಾವಿರ ಕಾರ್ಡ್​ಗಳು ರದ್ದುಗೊಳಿಸಲಾಗಿದೆ.

50 ಲಕ್ಷ ಬೋಗಸ್ ಕಾರ್ಡ್

ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ಸೋರಿಕೆ ತಡೆಗಟ್ಟಲು ಈ ಹಿಂದೆ ಪಡಿತರ ಕಾರ್ಡ್​ಗೆ ಆಧಾರ್ ಜೋಡಣೆ ಮಾಡಿದ್ದರಿಂದ ರಾಜ್ಯದಲ್ಲಿ ಅಂದಾಜು 50 ಲಕ್ಷ ನಕಲಿ ರೇಷನ್ ಕಾರ್ಡ್​ಗಳು ಪತ್ತೆಯಾಗಿತ್ತು.

ಇಕೆವೈಸಿಯಿಂದ ಅಕ್ರಮ ಪತ್ತೆ

ಬೋಗಸ್ ರೇಷನ್ ಕಾರ್ಡ್ ತಡೆಯುವ ಸಲುವಾಗಿ 4 ವರ್ಷದ ಹಿಂದೆ ರಾಜ್ಯಾದ್ಯಂತ ರೇಷನ್ ಕಾರ್ಡ್​ಗಳ ಪರಿಶೀಲನೆ ಕಾರ್ಯ ನಡೆದಿತ್ತು. ರಾಷ್ಟ್ರೀಯ ಆಹಾರ ಸುರಕ್ಷತೆ ಕಾಯ್ದೆ (ಎನ್​ಎಫ್​ಎಸ್​ಎ) ಪ್ರಕಾರ ಹಾಗೂ ಸುಪ್ರೀಂ ಕೋರ್ಟ್ ಆದೇಶದನ್ವಯ ಪಡಿತರ ಕಾರ್ಡ್​ನಲ್ಲಿರುವ ಪ್ರತಿಯೊಬ್ಬರೂ ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡಿಸಿಕೊಳ್ಳಬೇಕು ಎಂಬ ನಿಯಮ ತಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೇ.40 ಆಧಾರ್ ದೃಢೀಕರಣವಾಗಿದ್ದು, ಈಗ ಕರೊನಾದಿಂದ ಸ್ಥಗಿತಗೊಳಿಸಲಾಗಿದೆ. ಇ-ಕೆವೈಸಿ ಪೂರ್ಣಗೊಂಡರೆ ಮತ್ತಷ್ಟು ಅಕ್ರಮ ಕಾರ್ಡ್​ಗಳು ಪತ್ತೆಯಾಗಲಿವೆ.

ಅಕ್ರಮ ಕಾರ್ಡ್​ಗಳ ಪತ್ತೆ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇ-ಕೆವೈಸಿಯಿಂದ ಮತ್ತಷ್ಟು ಕಾರ್ಡ್​ಗಳು ಪತ್ತೆಯಾಗಲಿವೆ. ಮೂರು ವರ್ಷಗಳಲ್ಲಿ 12 ಲಕ್ಷಕ್ಕಿಂತ ಹೆಚ್ಚು ಅಕ್ರಮ ಕಾರ್ಡ್​ಗಳು ಪತ್ತೆ ಹಚ್ಚಲಾಗಿದೆ. ಇದರಿಂದ ಸರ್ಕಾರದ ಆರ್ಥಿಕ ಹೊರೆ ಕಡಿಮೆಯಾಗಲಿದೆ. | ಡಾ. ಶಮ್ಲಾ ಇಕ್ಬಾಲ್, ಆಹಾರ ಇಲಾಖೆ ಆಯುಕ್ತೆ

400 ರೂ.ಬಹುಮಾನ ಪಡೆಯಿರಿ

ಪಡಿತರ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲು ಇಲಾಖೆ ಬಹುಮಾನ ಯೋಜನೆ ಘೋಷಿಸಿದೆ. ಅನರ್ಹ ಪಡಿತರ ಚೀಟಿ ಮಾಹಿತಿ ನೀಡಿದರೆ 400 ರೂ. ಬಹುಮಾನ ಸಿಗಲಿದೆ. ಅಕ್ರಮ ಸಾಗಾಣಿಕೆ, ಕಾಳಸಂತೆಯಲ್ಲಿ ಪಡಿತರ ಮಾರಾಟವನ್ನು ಪತ್ತೆ ಮಾಡಿ ಮಾಹಿತಿ ನೀಡುವ ಸಾರ್ವಜನಿಕರಿಗೆ ಪ್ರಕರಣ ಸಾಬೀತಾದ ನಂತರ ಒಟ್ಟು ದಾಸ್ತಾನಿನ ಮೌಲ್ಯದ ಶೇ. 5 ನಗದು ಬಹುಮಾನವಾಗಿ ನೀಡಲಾಗುತ್ತದೆ.