ಶಿಕಾರಿಪುರ ತಾಲೂಕು ಕವಾಸಪುರದ ಇಮಾಂಬೀ ಹುಸೇನ್ ಅವರ ಮನೆ ಮೇಲೆ ಮರ ಬಿದ್ದಿರುವುದು.  
ನ್ಯೂಸ್

10 ಮನೆಗಳು, 4 ಕೊಟ್ಟಿಗೆಗೆ ಹಾನಿ

ಶಿಕಾರಿಪುರ: ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ತಾಲೂಕಿನಲ್ಲಿ 10 ಮನೆಗಳು, 4 ಕೊಟ್ಟಿಗೆಗಳು ಹಾನಿಗೀಡಾಗಿವೆ. ಈ ಪೈಕಿ 4 ಮನೆಗಳಿಗೆ ಪರಿಹಾರ ನೀಡಲಾಗಿದೆ. ಕಸಬಾ ಹೋಬಳಿ ಗಬ್ಬೂರು ಗ್ರಾಮದ ಸರ್ವೇ ನಂ. 91, 92ರಲ್ಲಿ ಗದ್ದೆ ಮತ್ತು ಕೊಟ್ಟ ಗ್ರಾಮದಲ್ಲಿ ಭತ್ತದ ಗದ್ದೆಗಳು ಜಲಾವೃತವಾಗಿವೆ.

ಮಳೆ ಜೋರಾದಾಗ ಕಪ್ಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟ ಗ್ರಾಮಕ್ಕೆ ಕುಮದ್ವತಿ ಹಿನ್ನೀರಿನಿಂದ ಸಮಸ್ಯೆ ಉಂಟಾಗುತ್ತದೆ. ಹೊಸನಗರ, ತೀರ್ಥಹಳ್ಳಿ, ರಿಪ್ಪನ್‌ಪೇಟೆ ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಅಂಜನಾಪುರ ಜಲಾಶಯಕ್ಕೆ ಒಂದೂವರೆ ಅಡಿ ನೀರು ಬಂದಿದೆ.

ಮುಂಗಾರು ಮಳೆಯನ್ನು ಎದುರಿಸಲು ತಾಲೂಕು ಆಡಳಿತ ಸನ್ನದ್ಧವಾಗಿದೆ. ಕಂದಾಯ, ಅರಣ್ಯ, ಪೊಲೀಸ್, ಪಂಚಾಯತ್‌ರಾಜ್ ಇಲಾಖೆಗಳ ಜಂಟಿ ಸಮಿತಿ ರಚಿಸಿ ಸುರಕ್ಷಾ ಉಪಕರಣಗಳನ್ನು ಜೋಡಿಸಿಕೊಳ್ಳಲಾಗಿದೆ. ವಿಪತ್ತು ನಿರ್ವಹಣೆಗೆ ತ್ವರಿತ ಪ್ರಕ್ರಿಯೆ ತಂಡವನ್ನು ರಚಿಸಲಾಗಿದೆ. ಅತಿವೃಷ್ಟಿ ಉಂಟಾದರೆ ಅಪಾಯ ಸಂಭವಿಸುವ ಸ್ಥಳಗಳನ್ನು ಗುರುತಿಸಲಾಗಿದೆ. ವಿದ್ಯುತ್ ವ್ಯತ್ಯಯ ಉಂಟಾದರೆ ಎರಡ್ಮೂರು ತಾಸಿನೊಳಗೆ ಸರಿಪಡಿಸಲು ಸೂಚಿಸಲಾಗಿದೆ ಎಂದು ತಹಸೀಲ್ದಾರ್ ಮಲ್ಲೇಶ್ ಪೂಜಾರ್ ತಿಳಿಸಿದ್ದಾರೆ.