ನ್ಯೂಸ್

ಆರಂಭಿಕ ಚರ್ಚೆಯಲ್ಲಿದೆ 10 ಗಂಟೆ ಕೆಲಸದ ಅವಧಿ: ಸಚಿವ ಸಂತೋಷ ಲಾಡ್ | Labour interest priority

ಬೆಂಗಳೂರು: ಖಾಸಗಿ ವಲಯದಲ್ಲಿ ದೈನಂದಿನ ಕೆಲಸದ ಅವಧಿಯನ್ನು 10 ಗಂಟೆಗಳಿಗೆ ಹೆಚ್ಚಿಸುವ ಕುರಿತು ಕೇಂದ್ರದ ಪ್ರಸ್ತಾವನೆ ಆರಂಭಿಕ ಚರ್ಚೆ ಹಂತದಲ್ಲಿದೆಯಷ್ಟೇ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಸಮಜಾಯಿಷಿ ನೀಡಿದರು.

ವಿಕಾಸಸೌಧದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಮಿಕರ ನೈಪುಣ್ಯತೆ ಸಂವಾದದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಯಾವುದೇ ಉದ್ಯಮ-ವಹಿವಾಟು ರಂಗಕ್ಕೆ ನೋಟಿಸ್ ನೀಡಿಲ್ಲ. ನಮ್ಮ ಶ್ರಮಿಕ ವರ್ಗದ ಹಿತವೇ ರಾಜ್ಯ ಸರ್ಕಾರ, ಕಾರ್ಮಿಕ ಇಲಾಖೆಗೆ ಮುಖ್ಯವಾಗಿದೆ ಎಂದರು.

ಉದ್ಯಮಕ್ಕೆ ಬೇಕಾದ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸಜ್ಜುಗೊಳಿಸುವುದು ಎರಡೂ ಕ್ಷೇತ್ರಗಳ ಹಿತದೃಷ್ಟಿಯಿಂದ ಅಗತ್ಯವಾಗಿದೆ ಎಂದು ’ಕಾರ್ಮಿಕರ ನೈಪುಣ್ಯತೆ ಅಭಿವೃದ್ಧಿ ಸಂವಾದ’ ಒಮ್ಮತದ ಒಲವು ವ್ಯಕ್ತವಾಯಿತು.

ಕೌಶಲ ಉನ್ನತೀಕರಣ ಕೇಂದ್ರ

ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಮಕ್ಕಳಿಗಾಗಿ ಧಾರವಾಡ ಮತ್ತು ಮೈಸೂರಿನಲ್ಲಿ ವೃತ್ತಿ ತರಬೇತಿ ಹಾಗೂ ಕೌಶಲ ಉನ್ನತೀಕರಣ ಕೇಂದ್ರಗಳನ್ನು ಸ್ಥಾಪಿಸಲು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಉದ್ಯೋಗದಾತರ, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಮಂಡಳಿಯ ಸದಸ್ಯರೊಂದಿಗೆ ನೈಪುಣ್ಯದ ಅಗತ್ಯತೆಗಳು, ಅವಕಾಶಗಳು, ಕೌಶಲ ವೃದ್ಧಿಯಿಂದ ಪ್ರಯೋಜನಗಳು ಕುರಿತು ಚರ್ಚೆಯಾಯಿತು.

ನಿರ್ಮಾಣ ವಲಯದಲ್ಲಿ ಡಿಜಿಟಲ್ ನಿರ್ಮಾಣ, ಕಟ್ಟಿಗೆ ಕೆಲಸಗಳು, ಗೃಹ ಯಾಂತ್ರೀಕರಣ, ಪ್ಲಾಸ್ಟರ್, ವಿದ್ಯುತ್ ಪೂರೈಕೆ ವ್ಯವಸ್ಥೆ, ನಿಖರ ತಯಾರಿಕೆ, ಎಲೆಕ್ಟ್ರಾನಿಕ್ಸ್, ಉದ್ಯಮ ಯಾಂತ್ರೀಕರಣ, ಮೆಕಾಟ್ರಾನಿಕ್ಸ್, ರೊಬೊಟಿಕ್ಸ್, ನವೀಕರಿಸಬಹುದಾದ ಇಂಧನ, ಸೇವೆ ಮತ್ತು ನಿರ್ವಹಣೆ, ಸೃಜನೆ ಮತ್ತು ಕಚೇರಿ ಮುಂತಾದ ಕೌಶಲಗಳನ್ನು ಹೊಂದುವ ಬಗ್ಗೆ ವಿಚಾರ ವಿನಿಮಯಗಳಾದವು.

ಸಂವಾದದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್, ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಆಯುಕ್ತ ಡಾ.ಗೋಪಾಲಕೃಷ್ಣ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಇದ್ದರು.