ನ್ಯೂಸ್

ಈಶಾನ್ಯ ದೆಹಲಿ ಹಿಂಸಾಚಾರ ಹಿನ್ನೆಲೆ 4 ಪ್ರದೇಶಗಳಲ್ಲಿ ಕರ್ಫ್ಯೂ ಜಾರಿ, ಮಾರ್ಚ್​ 24ರವರೆಗೆ 144 ಸೆಕ್ಷನ್​ ವಿಸ್ತರಣೆ

ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರ ಹಿನ್ನೆಲೆಯಲ್ಲಿ ಮೌಜಾಪುರ, ಜಫ್ರಾಬಾದ್​, ಚಾಂದ್​ಬಾಘ್​ ಮತ್ತು ಕರ್ವಾಲ್​ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಅಲ್ಲದೆ ಈಶಾನ್ಯ ದೆಹಲಿ ಭಾಗದಲ್ಲಿ ಜಾರಿಯಲ್ಲಿರುವ 144 ಸೆಕ್ಷನ್​ನ್ನು ಮಾರ್ಚ್​ 24ರವರೆಗೆ ವಿಸ್ತರಿಸಲಾಗಿದೆ.

ಪೌರತ್ವ ತಿದ್ದಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಸಂಬಂಧ ಇಂದು ಗೃಹ ಸಚಿಹ ಅಮಿತ್​ ಷಾ ಅವರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಮತ್ತು ಲೆಫ್ಟಿನೆಂಟ್​ ಗವರ್ನರ್​ ಅನಿಲ್​ ಬೈಜಲ್​ ಅವರೊಂದಿಗೆ ಸಭೆ ನಡೆಯಿತು.

ಪೌರತ್ವ ತಿದ್ದುಪಡಿ ಕಾಯ್ದೆ ಪರ ಮತ್ತು ವಿರೋಧಿ ಗುಂಪಿನ ನಡುವೆ ಉಂಟಾಗಿರುವ ಗಲಾಟೆಯು ಹಿಂಸಾಚಾರಕ್ಕೆ ತಿರುಗಿರುವ ಪರಿಣಾಮ ಪೊಲೀಸ್​ ಸಿಬ್ಬಂದಿ ಸೇರಿ ಸಾವಿಗೀಡಾಗಿದವರ ಸಂಖ್ಯೆ 10ಕ್ಕೇರಿದೆ.

ಗಲಭೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅದರಲ್ಲೂ ಸುಮಾರು 70 ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿಯ ಹಲವು ಭಾಗಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹಲವೆಡೆ ಅಂಗಡಿಗಳು ಭಸ್ಮವಾಗಿದ್ದು, ಈಶಾನ್ಯ ದೆಹಲಿಯ ಭಜನ್​ಪುರ, ಚಾಂದ್​​ ಬಾಘ್​ ಮತ್ತು ಕರ್ವಾಲ್​ ನಗರಗಳಲ್ಲಿ ಹಿಂಸಾಚಾರ ಹೆಚ್ಚಾಗಿತ್ತು.

ನಿನ್ನೆಯಷ್ಟೇ ಉಲ್ಬಣಗೊಂಡ ಹಿಂಸಾಚಾರಕ್ಕೆ ಈವರೆಗೂ 10 ಮಂದಿ ಬಲಿಯಾಗಿದ್ದು,ಗೃಹ ಸಚಿವಾಲಯ ಸೇನಾ ಪಡೆಗಳನ್ನು ನಿಯೋಜಿಸಿದೆ.

ಗಾಯಗೊಂಡ 130 ಮಂದಿಯಲ್ಲಿ 56 ಪೊಲೀಸ್​ ಸಿಬ್ಬಂದಿಯಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿಂಸಾಚಾರದಲ್ಲಿ ಮೃತಪಟ್ಟ ಪೊಲೀಸ್​ ಸಿಬ್ಬಂದಿ ಮತ್ತು ಇತರರಿಗೆ ಸಿಎಂ ಕೇಜ್ರಿವಾಲ್​ ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್​)