ಬೆಂಗಳೂರು: ಕರೊನಾ 2ನೇ ಅಲೆ ಹರಡುತ್ತಿರುವ ಸೋಂಕಿನ ವೇಗ ತಗ್ಗಿಸಲು ಲಾಕ್ಡೌನ್ ಸುತ್ತಲೇ ತಾಂತ್ರಿಕ ಸಲಹಾ ಸಮಿತಿ ಗಿರಕಿ ಹೊಡೆಯುತ್ತಿದೆ.
ವಿಧಾನ ಸೌಧ ಸಮ್ಮೇಳನ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಭಾನುವಾರ ಕರೆದಿದ್ದ ತುರ್ತು ಸಭೆಯಲ್ಲಿ ಸಮಿತಿ ಮತ್ತದೇ ಪ್ರಸ್ತಾಪ ಮುಂದಿಟ್ಟಿದೆ.
ಸೋಂಕಿನ ಸರಪಳಿ ತುಂಡರಿಸಲು ಬೆಂಗಳೂರು ಮಹಾ ನಗರದಲ್ಲಿ ಕನಿಷ್ಠ 10 ದಿನಗಳವರೆಗೆ ಲಾಕ್ಡೌನ್ ಜಾರಿಗೊಳಿಸುವುದು ಸೂಕ್ತ ಎಂದಿದೆ. ಅಲ್ಲದೆ, ಸದ್ಯಕ್ಕೆ 8 ನಗರಗಳಲ್ಲಿ ಜಾರಿಗೊಳಿಸಿರುವ ರಾತ್ರಿ ಕರೊನಾ ಕರ್ಫ್ಯೂ ಏಪ್ರಿಲ್ ಅಂತ್ಯದವರೆಗೆ ವಿಸ್ತರಿಸಬೇಕೆಂಬ ಸಲಹೆ ನೀಡಿದೆ.
ಲಾಕ್ ಡೌನ್ ವಿಷಯ ಮುಂದಿಟ್ಟಾಗ ಅದು ಬಿಟ್ಟು ಬೇರೆ ಸಲಹೆಗಳಿದ್ದರೆ ತಿಳಿಸಿ ಎಂದು ಸುಧಾಕರ್ ಕೋರಿದ್ದಾರೆ. ಲಾಕ್ಡೌನ್ ಗೆ ಸಿಎಂ ಬಿಎಸ್ ವೈ ಒಲವಿಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಲಾಕ್ಡೌನ್ ಮಾಡಲೂ ಸರ್ಕಾರಕ್ಕೆ ಸಾಧ್ಯವಾಗದು ಎಂಬುದನ್ನು ಸಮಿತಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.