ಭದ್ರಾವತಿ: ನಾಡಹಬ್ಬ ದಸರಾ ಮಹೋತ್ಸವವನ್ನು 54.50 ಲಕ್ಷ ರೂ. ಅಂದಾಜು ವೆಚ್ಚದಲ್ಲಿ 10 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ನಗರಸಭೆ ಪ್ರಭಾರ ಅಧ್ಯಕ್ಷ ಹಾಗೂ ದಸರಾ ಮಹೋತ್ಸವ ಉಸ್ತುವಾರಿ ಸಮಿತಿ ಅಧ್ಯಕ್ಷ ಎಂ.ಮಣಿ ಹೇಳಿದರು.
ನಗರಸಭೆ ಕಚೇರಿ ಸಭಾಂಗಣದಲ್ಲಿ ಗುರುವಾರ ದಸರಾ ಮಹೋತ್ಸವ ಆಚರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅ.3ರಿಂದ ಅ.12ರವರೆಗೂ 10 ದಿನಗಳ ಕಾಲ ನಡೆಯುವ ದಸರಾ ಮಹೋತ್ಸವನ್ನು ಅ.3ರಂದು ಬೆಳಗ್ಗೆ 10 ಗಂಟೆಗೆ ನಗರಸಭೆ ಎದುರಿನ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಉದ್ಘಾಟಿಸುವರು ಎಂದು ತಿಳಿಸಿದರು.
ಅ.4ರಂದು ಕನಕ ಮಂಟಪ ಮೈದಾನದಲ್ಲಿ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿಯನ್ನು ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ ಸುಧೀಂದ್ರಕುಮಾರ್ ನೆರವೇರಿಸುವರು. 5ರಂದು ಸಂಜೆ 4 ಗಂಟೆಗೆ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. 6ರಂದು ಜನ್ನಾಪುರದ ಬಂಟರ ಭವನದಲ್ಲಿ ಮಹಿಳೆಯರಿಗೆ ಬೆಂಕಿ ರಹಿತ ಅಡುಗೆ ಸ್ಪರ್ಧೆ, 7ರಂದು ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಮಹೇಶ್ವರಪ್ಪ ಕುಸ್ತಿ ಪಂದ್ಯಾವಳಿ ಉದ್ಘಾಟಿಸುವರು. ವಿಜೇತರಿಗೆ ಬೆಳ್ಳಿ ಗದೆ, 2024ರ ದಸರಾ ಕೇಸರಿ ಬಿರುದು ನೀಡಿ ಗೌರವಿಸಲಾಗುವುದು. 8ರಂದು ಮಹಿಳಾ ದಸರಾ ಅಂಗವಾಗಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದರು.
9ರಂದು ಕನಕ ಮಂಟಪ ಮೈದಾನದಲ್ಲಿ ಮಿಮಿಕ್ರಿ ಗೋಪಿ ಹಾಗೂ ಗಿಚ್ಚಿ ಗಿಲಿಗಿಲಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.12ರ ಕೊನೆಯ ದಿನವಾದ ವಿಜಯದಶಮಿ ದಿನದಂದು ಅಪ್ಪರ್‌ಹುತ್ತಾ ಬಸ್ ನಿಲ್ದಾಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿ ಸೇರಿ 50ಕ್ಕೂ ಹೆಚ್ಚು ದೇವತೆಗಳ ಬೃಹತ್ ಮೆರವಣಿಗೆ ನಡೆಯಲಿದೆ. ಮೆರವಣಿಗೆಗೆ ಶಾಸಕ ಬಿ.ಕೆ.ಸಂಗಮೇಶ್ವರ್ ಚಾಲನೆ ನೀಡುವರು. ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಕನಕ ಮಂಟಪ ಮೈದಾನದಲ್ಲಿ ಸಂಜೆ ಬನ್ನಿ ಮುಡಿಯುವ ಮೂಲಕ ರಾವಣನ ಸಂಹಾರದೊಂದಿಗೆ ದಸರಾ ಹಬ್ಬಕ್ಕೆ ತೆರೆಬೀಳಲಿದೆ ಎಂದು ತಿಳಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಕದಿರೇಶ್, ಲತಾ ಚಂದ್ರಶೇಖರ್, ಅನುಸುಧಾ ಮೋಹನ್ ಪಳನಿ, ಚನ್ನಪ್ಪ, ರಿಯಾಜ್, ಕೋಟೇಶ್ವರ ರಾವ್, ಸುನೀತಾ ಇದ್ದರು.