ಕೋಲಾರ: ವಿಧಾನಸಭಾ ಕ್ಷೇತ್ರದಲ್ಲಿ ಕುರುಬ ಸಮಾಜಕ್ಕೆ ವರ್ತೂರು ಪ್ರಕಾಶ್ ಅವರ ಕೊಡುಗೆ ಏನು? ಎಂದು ಪ್ರಶ್ನೆ ಮಾಡುವವರಿಗೆ ಉತ್ತರವಾಗಿ, ಮುಖ್ಯಮಂತ್ರಿಗಳಿಂದ ನಗರದಲ್ಲಿ ಕನಕ ಸಮುದಾಯ ಭವನ ನಿಮಾರ್ಣಕ್ಕೆ 1 ಕೋಟಿ ರೂ., ಕೋಲಾರ ನಗರಾಭಿವೃದ್ಧಿಗೆ 10 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿಸಿದ್ದೇನೆ ಎಂದು ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಅನುದಾನ ಆದೇಶ ಪ್ರತಿ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿರುವುದರಿಂದ ತಮ್ಮ ಮನವಿ ಮೇರೆಗೆ ಕ್ಷೇತ್ರದಲ್ಲಿ 433 ಕಾಮಗಾರಿಗಳಿಗೆ 10 ಕೋಟಿ ರೂಪಾಯಿ ಅನುದಾನವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಡಿ ಒದಗಿಸಲು ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ ಎಂದರು.
ಭೂಮಿ ಮಂಜೂರು: ಕುರುಬ ಸಮಾಜಕ್ಕೆ ಹೆಚ್ಚಿನ ಸೌಲಭ್ಯ ಹಾಗೂ ಅನುದಾನ ನೀಡಿರುವುದು ಬಿಜೆಪಿ ಸರ್ಕಾರ ಮಾತ್ರ. ಹಾಗೆಯೇ ಸಮುದಾಯವನ್ನು 2ಎಗೆ ಸೇರಿಸಿದ ಕೀರ್ತಿ ಮಾಜಿ ಪ್ರಧಾನಿ ದೇವೇಗೌಡರಿಗೆ ಸಲ್ಲುತ್ತದೆ. ಕೋಲಾರದಲ್ಲಿ ಕನಕ ಕಲ್ಯಾಣ ಮಂಟಪ ನಿಮಾರ್ಣಕ್ಕೆ 2ಎಕರೆ ಭೂಮಿ, 10 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ತಿಳಿಸಿದ್ದಾರೆ ಎಂದರು.
2013ರಿಂದ 2018ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸಮಾಜದ ಉನ್ನತಿಗಾಗಿ ಏನೂ ಮಾಡಲಿಲ್ಲ. ಕನಿಷ್ಠ ಒಬ್ಬರಿಗೆ ಮಂತ್ರಿ ಸ್ಥಾನ, ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡಿಲ್ಲ ಎಂದು ಟೀಕಿಸಿದರು.
ಆದರೆ, ಬಿಜೆಪಿ ಸರ್ಕಾರ ಇಬ್ಬರು ಮಂತ್ರಿಗಳನ್ನು ಸಮಾಜಕ್ಕೆ ನೀಡಿದೆ. ಹಾಗೂ ಒಬ್ಬರು ಸಭಾಪತಿ ಹಾಗೂ ನಿಗಮ ಮಂಡಳಿಯಲ್ಲಿ ಸಮುದಾಯದವರಿಗೆ ಸ್ಥಾನ ನೀಡಿದೆ. ಇದನ್ನು ಮನಗಂಡು ಯಾವ ಪಕ್ಷ ಬೆಂಬಲಿಸಿದರೆ ಸಮಾಜಕ್ಕೆ ಒಳಿತಾಗುತ್ತದೆ ಎಂಬುದರ ಬಗ್ಗೆ ತೀಮಾರ್ನ ತೆಗೆದುಕೊಂಡು ಮತ ಚಲಾಯಿಸಿ ಎಂದರು.
ಹುಲಿ ಸಿಂಹಗಳಿಗೆ ಹೆದರಲ್ಲ: ವರ್ತೂರು ಪ್ರಕಾಶ್ ಹುಲಿ ಸಿಂಹಗಳು ಬಂದರೂ ಹೆದರಲ್ಲ, ಕ್ಷೇತ್ರ ಬಿಟ್ಟು ಹೋಗುತ್ತೇನೆ ಎನ್ನುವವರಿಗೆ ಜ.9ರಂದು ವರ್ತೂರು ಎಂದರೆ ಏನು ಎಂಬುದನ್ನು ತೋರಿಸುತ್ತೇನೆ. ಆ ದಿವಸ ಕೋಲಾರದ ಚಿತ್ರಣವೇ ಬೇರೆಯಾಗುತ್ತದೆ.
2008ರಿಂದ 2018ರವರೆಗಿನ ಎಲ್ಲ ಚುನಾವಣೆಗಳಲ್ಲಿಯೂ ಕುರುಬ ಸಮುದಾಯ ನನ್ನ ಜತೆಯಲ್ಲಿದೆ. ಮುಂದೆಯೂ ನನ್ನ ಜತೆಯಲ್ಲಿರುತ್ತದೆ. ಬಿಜೆಪಿಯಿಂದ ಯಾರಿಗೆ ಟಿಕೆಟ್ ನೀಡಿದರೂ ನಮ್ಮ ಸಮುದಾಯ ಬಿಜೆಪಿ ಪರವಾಗಿ ಇರುತ್ತದೆ ಎಂದರು.