ಕೆ.ಆರ್.ನಗರ: ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ 1.97 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎಚ್.ಸ್ವಾಮಿ ತಿಳಿಸಿದರು.
ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಗಿರಿಜಮ್ಮ ಬಳೆ ಬಸವರಾಜಪ್ಪ ಧರ್ಮಶಾಲೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 2022-23ನೇ ಸಾಲಿನ ಸದಸ್ಯರ ವಾರ್ಷಿಕ ಸಭೆಯಲ್ಲಿ ಲೆಕ್ಕಪತ್ರ ಮಂಡಿಸಿ ಅವರು ಮಾತನಾಡಿದರು. ಸಂಘದಲ್ಲಿ 705 ಸದಸ್ಯರಿದ್ದು 37,60,050 ರೂ. ಷೇರು ಬಂಡವಾಳ ಹೊಂದಲಾಗಿದೆ. ಸಂಘವು ಸದಸ್ಯರಿಗೆ 50 ಸಾವಿರದಿಂದ 2 ಲಕ್ಷ ರೂ.ವರೆಗೆ ಸಾಲ ನೀಡಿದ್ದು, ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು. ಮುಂದಿನ ದಿನಗಳಲ್ಲಿ ಸದಸ್ಯರಿಗೆ ಹೆಚ್ಚಿನ ಸಾಲ ನೀಡುವುದರ ಜತೆಗೆ ಠೇವಣಿ ಸಂಗ್ರಹಿಸಿ ಉತ್ತಮ ಲಾಭ ಗಳಿಸಲು ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಸಂಘದಿಂದ ನಿವೇಶಗಳನ್ನು ನಿರ್ಮಿಸಿದ್ದು ಯೋಜನಾ ಪ್ರಾಧಿಕಾರದ ಆದೇಶದಂತೆ ಅಲ್ಪಸಲ್ಪ ಕೆಲಸಗಳು ಬಾಕಿ ಉಳಿದಿವೆ. ತಿಂಗಳ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು ಮುಂದಿನ ತಿಂಗಳು ಕೊನೆಯಲ್ಲಿ ಈಗಾಗಲೇ ಸಂಘದಲ್ಲಿ ನೋಂದಾಯಿಸಿರುವ ಸದಸ್ಯರಿಗೆ ನೀಡಲಾಗುವುದು. ನಿವೇಶನ ಬೇಕಾದ ಸದಸ್ಯರು ಈ ತಿಂಗಳ ಅಂತ್ಯಕ್ಕೆ ಸಂಘ ತೀರ್ಮಾನ ಮಾಡಿದ ಹಣವನ್ನು ಕಟ್ಟಿದರೆ ನಿವೇಶನ ಕೊಡಲಾಗುವುದು ಎಂದರು.
ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸದಸ್ಯರನ್ನು ಸನ್ಮಾನಿಸಲಾಯಿತು. ಗೌರವ ಕಾರ್ಯದರ್ಶಿ ಜಿ.ಎನ್.ಲೋಕೇಶ್, ಹಂಗಾಮಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಎಂ.ಮೇಘನಾ, ಉಪಾಧ್ಯಕ್ಷ ಅಣ್ಣೇಗೌಡ, ನಿರ್ದೇಶಕರಾದ ಪ್ರಸನ್ನಕುಮಾರ್, ಕಲ್ಲೇಶ್, ಪಿ.ಎ.ಪುಟ್ಟರಾಜು, ಎಂ.ಮಧುರ, ಎಂ.ಎನ್.ಅರುಣ, ಪ್ರಸನ್ನ ಕುಮಾರ್, ಬಿ.ಎಸ್.ಚಿದಾನಂದ, ರಾಜಶೇಖರ್, ಮೂರ್ತಿ, ನಿವೃತ್ತ ನೌಕರರಾದ ಚೆಲುವರಾಜ್, ಕೃಷ್ಣ, ಬಿ.ಸಿ.ಲೋಕೇಶಪ್ಪ, ನಾಗರಾಜ್, ಮಹೇಶ್, ಮಹದೇವಪ್ಪ, ಏಜಾಜ್ ಅಹ್ಮದ್ ಶರೀಫ್, ಸುರೇಶ, ಶಾಂತವೀರಪ್ಪ ಹಾಜರಿದ್ದರು.