ಬೆಂಗಳೂರು: ಹಣಕಾಸಿನ ಸಂಸ್ಥೆಯಲ್ಲಿ ಹೂಡಿಕೆ ಮಾಡಿದರೆ, ಹೆಚ್ಚು ಲಾಭ ಬರಲಿದೆ ಎಂದು ನಂಬಿಸಿ ಟೆಕ್ಕಿಯೊಬ್ಬರಿಗೆ ಬರೋಬರಿ ೧.೫೩ ಕೋಟಿ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಬಾಣಸವಾಡಿ ನಿವಾಸಿ ನೀತು ರಮೇಶ್ ಪುಟನೆ ಎಂಬವರು ನೀಡಿದ ದೂರಿನ ಮೇರೆಗೆ ಪೂರ್ವ ವಲಯದ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, 1.53 ಕೋಟಿ ರೂ. ನಗದು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ದೂರದಾರರನ್ನು ಬ್ಲಾೃಕ್‌ರಾಕ್ ಮತ್ತು ಆ್ಯಂಗಲ್ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಲಾಗಿತ್ತು. ಬಳಿಕ ಅಲ್ಲಿನ ಕೆಲ ಸದಸ್ಯರು ದೂರುದಾರರಿಗೆ ಕರೆ ಮಾಡಿ ಬ್ಲಾೃಕ್‌ರಾಕ್ ಕಂಪನಿಗಳ ಮೇಲೆ ಹಣ ಹೂಡಿಕೆ ಮಾಡುವಂತೆ ದುಂಬಾಲು ಬಿದ್ದಿದ್ದು, ಹೆಚ್ಚು ಲಾಭ ಬರುವುದಾಗಿಯೂ ಹೇಳಿದ್ದಾರೆ. ಅದಕ್ಕೆ ದಂಪತಿ ಒಪ್ಪಿಗೆ ಸೂಚಿಸಿದಾಗ ಒಂದು ಲಿಂಕ್ ಕಳುಹಿಸಿದ್ದರು. ಆ ಲಿಂಕ್ ಕ್ಲಿಕ್ ಮಾಡಿದ ದೂರುದಾರರು, ತಮ್ಮ ವೈಯಕ್ತಿಕ ದಾಖಲೆಗಳನ್ನು ನೋಂದಾಯಿಸಿದ್ದಾರೆ. ಬಳಿಕ ಆರೋಪಿಗಳು ಸೂಚಿಸಿದ ವಿವಿಧ ಖಾತೆಗಳಿಗೆ ಸುಮಾರು ೧೬ ಬಾರಿ ಹಂತ-ಹಂತವಾಗಿ ಬರೋಬರಿ ೧.೫೩ ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಕೆಲ ತಿಂಗಳ ಬಳಿಕ ತಮ್ಮ ಹಣದಲ್ಲಿ ದುಪ್ಪಟ್ಟು ಆಗುತ್ತಿರುವುದನ್ನು ಗಮನಿಸಿ ತಮಗೆ ಖುಷಿ ಆಗಿತ್ತು. ಆ ನಂತರ ತಮ್ಮ ಹಣ ಡ್ರಾ ಮಾಡಿಕೊಳ್ಳಲು ಯತ್ನಿಸಿದಾಗ ಸಾಧ್ಯವಾಗಿಲ್ಲ. ಬಳಿಕ ತಮ್ಮನ್ನು ಸಂಪರ್ಕಿಸಿದ ವ್ಯಕ್ತಿಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ತಮಗೆ ವಂಚನೆಗೊಳಗಾಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಸೆನ್ ಠಾಣೆ ಪೊಲೀಸರು ತಿಳಿಸಿದ್ದಾರೆ.