ನವದೆಹಲಿ/ಬೆಂಗಳೂರು: ದೇಶದ ಪ್ರತಿಷ್ಠಿತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಯುಜಿ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರನ್ಸ್ ಟೆಸ್ಟ್ - ಅಂಡರ್ಗ್ರಾಜುಯೇಟ್) ಶನಿವಾರ ದೇಶಾದ್ಯಂತ ಏಕಕಾಲದಲ್ಲಿ ನಡೆಯಲಿದೆ. ಬಾರಿಯ ಪರೀಕ್ಷೆಗೆ ಕರ್ನಾಟಕದಲ್ಲಿ 1.49 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ರಾಜ್ಯಾದ್ಯಂತ 381 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದೇಶಾದ್ಯಂತ 5453 ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದೆ. ಸುಮಾರು 23 ಲಕ್ಷ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಕನಸನ್ನು ಈ ಪರೀಕ್ಷೆಯ ಮೂಲಕ ಸಾಕಾರಗೊಳಿಸಲು ಸಿದ್ಧರಾಗಿದ್ದಾರೆ.
ನೀಟ್ ಯುಜಿ 2025 ಪರೀಕ್ಷೆಯು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಒಂದೇ ಸೆಷನ್ನಲ್ಲಿ ನಡೆಯಲಿದೆ. ಈ ಬಾರಿಯ ಪರೀಕ್ಷೆಯ ಅವಧಿಯನ್ನು 3 ಗಂಟೆಗಳಿಗೆ ಸೀಮಿತಗೊಳಿಸಲಾಗಿದ್ದು, ಕಳೆದ ವರ್ಷಕ್ಕಿಂತ 20 ನಿಮಿಷ ಕಡಿಮೆ ಮಾಡಲಾಗಿದೆ. ಪರೀಕ್ಷೆಯನ್ನು 13 ಭಾಷೆಗಳಲ್ಲಿ ಬರೆಯಬಹುದು. ಇಂಗ್ಲಿಷ್, ಹಿಂದಿ, ಕನ್ನಡ, ತಮಿಳು, ತೆಲುಗು ಹಲವು ಭಾಷೆಗಳ ಆಯ್ಕೆ ನೀಡಲಾಗಿದೆ. ಕರ್ನಾಟಕದ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯುವ ಆಯ್ಕೆ ಲಭ್ಯವಿದೆ. ಇದು ಸ್ಥಳೀಯ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ.
ವಿದ್ಯಾರ್ಥಿಗಳು ಕಡ್ಡಾಯವಾಗಿ ಎನ್ಟಿಎ ಅಡ್ಮಿಟ್ ಕಾರ್ಡ್ ನ ಹಾರ್ಡ್ ಕಾಪಿಯನ್ನು ತರಬೇಕು. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಫೋನ್ಗಳಿಗೆ ಅವಕಾಶವಿಲ್ಲ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಅಥವಾ ಡ್ರೖೆವಿಂಗ್ ಲೈಸೆನ್ಸ್ ನಂತಹ ಸರ್ಕಾರಿ ಗುರುತಿನ ಚೀಟಿಯನ್ನು ತರಬೇಕು. ಎರಡು ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋಗಳು, ಸಣ್ಣ ಸ್ಯಾನಿಟೈಸರ್ ಬಾಟಲ್ ಮತ್ತು ಪಾರದರ್ಶಕ ನೀರಿನ ಬಾಟಲ್ಗೆ ಅವಕಾಶವಿದೆ. ಪರೀಕ್ಷಾ ಕೇಂದ್ರದಲ್ಲಿ ಒದಗಿಸಲಾಗುವ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಅಗತ್ಯ ಸಿದ್ಧತೆ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಪರೀಕ್ಷೆಯನ್ನು ಸುಗಮವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ವಿವಿಧ ಕ್ರಮಗಳನ್ನು ಕೈಗೊಂಡಿದೆ. ಕಳೆದ ವರ್ಷದಂತೆ ಪೇಪರ್ ಲೀಕ್ ಆರೋಪ ತಪ್ಪಿಸಲು ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ. ಪೊಲೀಸ್ ಎಸ್ಕಾರ್ಟ್, ಕಟ್ಟುನಿಟ್ಟಿನ ಫ್ರಿಸ್ಕಿಂಗ್ ಮತ್ತು ಕೋಚಿಂಗ್ ಸೆಂಟರ್ಗಳ ಮೇಲ್ವಿಚಾರಣೆಯಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎನ್ಟಿಎ ಹೊಸ ಆನ್ಲೈನ್ ಪೋರ್ಟಲ್ ಅನ್ನು ಸಹ ಪರಿಚಯಿಸಿದ್ದು, ಇದರ ಮೂಲಕ ವಿದ್ಯಾರ್ಥಿಗಳು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ವರದಿ ಮಾಡಬಹುದು. ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳ ಸುರಕ್ಷತೆಗಾಗಿ ಸ್ಥಳೀಯ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಲಾಗಿದೆ.
ಕರ್ನಾಟಕದಲ್ಲಿ 381 ಕೇಂದ್ರ: ಕರ್ನಾಟಕದ 1.49 ಲಕ್ಷ ವಿದ್ಯಾರ್ಥಿ ಗಳು ನೋಂದಣಿ ಮಾಡಿಕೊಂಡಿದ್ದಾರೆ. ಮಧ್ಯಾಹ್ನ 2ರಿಂದ ಸಂಜೆ 5 ಗಂಟೆಯವರೆಗೆ ರಾಜ್ಯದ 381 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಆದರೆ, ಅಭ್ಯರ್ಥಿಗಳು ತಪಾಸಣೆಗೆ ಒಳಗಾಗಲು ಬೆಳಗ್ಗೆ 11ರಿಂದ ಮಧ್ಯಾಹ್ನ 1.30ರೊಳಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗುವಂತೆ ಸೂಚಿಸಲಾಗಿದೆ.ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿದ್ದು, ಪ್ರವೇಶ ಪತ್ರದಲ್ಲಿ ನೀಡಲಾಗಿರುವ ಸೂಚನೆ ಅನ್ವಯ ಮಾರ್ಗಸೂಚಿಯನ್ನು ಪಾಲಿಸಬೇಕು.
ಎನ್ಟಿಎ ನಿಗದಿ ಪಡಿಸಿದ ವಸ್ತ್ರ ಸಂಹಿತೆಯನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು. ಲೈಟ್ ಕಲರ್ನ ಸಾದಾ ಜೀನ್ಸ್ಗೆ ಅವಕಾಶವಿದೆ. ಆದರೆ ಭಾರಿ ಕಸೂತಿ ಅಥವಾ ಡಿಸೈನ್ಗಳಿರುವ ಬಟ್ಟೆಗಳಿಗೆ ಅನುಮತಿಯಿಲ್ಲ. ಆಭರಣಗಳು, ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು, ಕೈಗಡಿಯಾರಗಳನ್ನು ಪರೀಕ್ಷೆ ಕೊಠಡಿ ಒಳಗೆ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ವಿದ್ಯಾರ್ಥಿಗಳು ಪೂರ್ಣ ತೋಳಿರುವ ಅಂಗಿ, ದೊಡ್ಡ ಬಟನ್ಗಳಿರುವ ಶರ್ಟ್/ಪ್ಯಾಂಟ್, ಶೂ, ಸಾಕ್ಸ್, ಎತ್ತರದ ಚಪ್ಪಲಿಗಳು, ಕಿವಿಯೋಲೆ, ಬಳೆ, ಸರ, ಕಾಲ್ಗೆಜ್ಜೆ, ಮೂಗುತಿ, ಜಡೆ ಕ್ಲಿಪ್ ಹಾಗೂ ಇತರ ಯಾವುದೇ ಆಭರಣಗಳನ್ನು ಧರಿಸುವಂತಿಲ್ಲ. ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ ಎಂಬ ಸೂಚನೆ ನೀಡಿದೆ.
ಪರೀಕ್ಷಾ ಕೇಂದ್ರದಲ್ಲಿ ಪ್ರತಿ ಗಂಟೆಗೊಮ್ಮ ಬೆಲ್ ಬಾರಿಸುವ ಮೂಲಕ ಸೂಚನೆ ನೀಡಲಾಗುವುದು. ಪರೀಕ್ಷೆಗೆ ಹಾಜರಾಗುವ ದಿವ್ಯಾಂಗರು /ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿರುತ್ತದೆ. ಎನ್ಟಿಎ ವತಿಯಿಂದ ಜಾಮರ್ ಅಳವಡಿಸ ಲಾಗಿದೆ. ಬೆಳಿಗ್ಗೆ 11 ಗಂಟೆ ನಂತರ ಎನ್ಟಿಎ ನೇಮಿಸಿರುವ ಏಜೆನ್ಸಿಗಳಿಂದ ನೋಂದಣಿ ಹಾಗೂ ನಿಯೋಜಿತ ಪೊಲೀಸ್ ಸಿಬ್ಬಂದಿ ವತಿಯಿಂದ ವಿದ್ಯಾರ್ಥಿಗಳ ಸುರಕ್ಷತಾ ತಪಾಸಣೆ ಪ್ರಕ್ರಿಯೆ ಆರಂಭಿಸಲಾಗುತ್ತದೆ.