ಬೆಂಗಳೂರು: ಟ್ರೇಡಿಂಗ್ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಆಮಿಷ ಒಡ್ಡಿ ಹಿರಿಯ ವೃದ್ಧರೊಬ್ಬರಿಗೆ ಸೈಬರ್ ಕಳ್ಳರು 1.33 ಕೋಟಿ ರೂ. ವಂಚನೆ ಮಾಡಿದ್ದಾರೆ.
ಎಚ್‌ಎಎಲ್ 3ನೇ ಹಂತದಲ್ಲಿ ನೆಲೆಸಿರುವ 70 ವರ್ಷದ ವೃದ್ಧನನ್ನು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿಕೊಂಡು ಟ್ರೇಡಿಂಗ್ ವ್ಯವಹಾರದ ಬಗ್ಗೆ ತರಬೇತಿ ನೀಡುವುದಾಗಿ 15 ದಿನಗಳ ಕಾಲ ಮಾಹಿತಿ ಹಂಚಿಕೊಂಡಿದ್ದರು. ಬಳಿಕ ಹಣ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಸಿಗಲಿದೆ ಎಂದು ಹೇಳಿ 50 ಸಾವಿರ ರೂ. ಮೊದಲು ಹೂಡಿಕೆ ಮಾಡಿಸಿಕೊಂಡಿದ್ದಾರೆ. ಬಳಿಕ 1.25 ಲಕ್ಷ ರೂ. ಇದಾದ ಮೇಲೆ ಹಂತ ಹಂತವಾಗಿ 1.33 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.
ಬಳಿಕ ಒಂದು ವರ್ಷದ ಬಳಿಕ ರಿಟನರ್ಸ್ ಬರಲಿದೆ ಎಂದು ಸುಮ್ಮನಾಗಿದ್ದರು. ವರ್ಷ ತುಂಬಿದ ಮೇಲೆ ವಿತ್ ಡ್ರಾ ಮಾಡಲು ಪ್ರಯತ್ನ ಮಾಡಿದಾಗ ಅಷ್ಟೊತ್ತಿಗೆ ಆ್ಯಪ್ ಮತ್ತು ವೆಬ್‌ಸೈಟ್ ಸ್ಥಗಿತವಾಗಿತ್ತು. ಎಲ್ಲಿಗೆ ಸಂಪರ್ಕ ಮಾಡಬೇಕೆಂದು ಗೊತ್ತಾಗದೆ ಕೊನೆಗೆ ವೃದ್ಧ, ಸಿಇಎನ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.