ನ್ಯೂಸ್

ಟ್ರೇಡಿಂಗ್ ಸೋಗಿನಲ್ಲಿ 1.29 ಕೋಟಿ ರೂ.ವಂಚನೆ

ಬೆಂಗಳೂರು: ವಾಟ್ಸ್‌ಆ್ಯಪ್ ಚಾಟಿಂಗ್‌ನಲ್ಲಿ ಪರಿಚಯನಾದ ಸ್ನೇಹಿತನ ಮಾತು ನಂಬಿ ಟ್ರೇಡಿಂಗ್‌ನಲ್ಲಿ 1.29 ಕೋಟಿ ರೂ. ಹೂಡಿಕೆ ಮಾಡಿ ವ್ಯಾಪಾರಿಯೊಬ್ಬರು ಸೈಬರ್ ವಂಚನೆಗೆ ಒಳಗಾಗಿದ್ದಾರೆ.

ಅವಿನ್ಯೂ ರಸ್ತೆ ಚಂಪಕ ಟವರ್ ನಿವಾಸಿ ಎಚ್. ಶಾಲು ಇಶ್ರಾಣಿ ವಂಚನೆಗೆ ಒಳಗಾದವರು. ಕಳೆದ ಎರಡು ವರ್ಷಗಳಿಂದ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡುತ್ತಿದ್ದ ಶಾಲು ಅವರಿಗೆ, ವರ್ಷದ ಹಿಂದೆ ವಾಟ್ಸ್‌ಆ್ಯಪ್‌ನಲ್ಲಿ ಅಪರಿಚಿತ ವ್ಯಕ್ತಿ ಪರಿಚಯವಾಗಿದ್ದಾನೆ. ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸಬಹುದು. ಕೇವಲ 15 ತಿಂಗಳಲ್ಲಿ ಶೇ.20ರಿಂದ 30 ಲಾಭ ಸಿಗಲಿದೆ ಎಂದು ಆಮಿಷವೊಡ್ಡಿದ್ದ. ಇದನ್ನು ನಂಬಿದ ಶಾಲು, ಬೇರೆ ಕಡೆ ಹೂಡಿಕೆ ಮಾಡಿದ್ದ ಹಣವನ್ನು ವಿತ್ ಡ್ರಾ ಮಾಡಿಕೊಂಡು ವಂಚಕ ಹೇಳಿದಂತೆ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಲು ಶುರು ಮಾಡಿದ್ದಾರೆ. ಅಪ್ಲಿಕೇಷನ್‌ನಲ್ಲಿ ಶೇ.20ರಿಂದ 30 ಲಾಭಾಂಶ ಲಭ್ಯವಾಗಿರುವುದಾಗಿ ಉಲ್ಲೇಖ ಸಹ ಆಗಿದ್ದು, ಇತ್ತೀಚೆಗೆ ವಿತ್ ಡ್ರಾ ಮಾಡಲು ಮುಂದಾದಾಗ ಸಾಧ್ಯವಾಗಿಲ್ಲ.

ಈ ಬಗ್ಗೆ ಸಂಬಂಧಪಟ್ಟ ವ್ಯಕ್ತಿಗೆ ಕರೆ ಮಾಡಿ ವಿಚಾರಿಸಿದಾಗ ಮತ್ತಷ್ಟು ಹಣ ಹೂಡಿಕೆ ಮಾಡಿದರೆ ಸಾಧ್ಯವಾಗಲಿದೆ ಎಂದು ಸೂಚಿಸಿದ್ದಾನೆ. ಲಾಭಾಂಶ ಮಾತ್ರ ವಿತ್ ಡ್ರಾ ಮಾಡುವುದಾಗಿ ಹೇಳಿದಾಗಲು ಅವಕಾಶ ಕಲ್ಪಿಸಿಲ್ಲ. ಹೆಚ್ಚು ಒತ್ತಾಯ ಮಾಡಿದಾಗ ಸಂಪರ್ಕ ಕಡಿತ ಮಾಡಿಕೊಂಡಿದ್ದಾರೆ. ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಶಾಲು, ಕೇಂದ್ರ ವಿಭಾಗ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.