ನ್ಯೂಸ್

ಟ್ರೇಡಿಂಗ್ ನೆಪದಲ್ಲಿ 1.21 ಕೋಟಿ ರೂ. ಧೋಖಾ

ಬೆಂಗಳೂರು: ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯನಾದ ಅಪರಿಚಿತ ವ್ಯಕ್ತಿಯ ಮಾತು ನಂಬಿ ಯುವಕನೊಬ್ಬ ಸ್ಟಾಕ್ ಮಾರ್ಕೆಟ್‌ನಲ್ಲಿ 1.21 ಕೋಟಿ ರೂ. ಹೂಡಿಕೆ ಮಾಡಿ ಸೈಬರ್ ವಂಚನೆಗೆ ಒಳಗಾಗಿದ್ದಾನೆ.

ಖಾಸಗಿ ಕಂಪನಿ ಉದ್ಯೋಗಿ ವಂಚನೆಗೆ ಒಳಗಾದವ. ಈತ ಕೊಟ್ಟ ದೂರಿನ ಮೇರೆಗೆ ಕೇಂದ್ರ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

2023ರ ಡಿಸೆಂಬರ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಯುವಕನಿಗೆ ಅಪರಿಚಿತ ವ್ಯಕ್ತಿ ಪರಿಚಯನಾಗಿ ಟ್ರೇಡಿಂಗ್ ವ್ಯವಹಾರದ ಬಗ್ಗೆ ಸಲಹೆ ನೀಡಿದ್ದಾನೆ. ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭಾಂಶ ಸಿಗಲಿದೆ. ಯಾವುದೇ ನಷ್ಟ ಇರುವುದಿಲ್ಲ. ಇದಕ್ಕೆ ಬೇಕಾದ ತರಬೇತಿ ಮತ್ತು ಸಲಹೆಗಳನ್ನು ಕೊಡುವುದಾಗಿ ನಂಬಿಸಿದ್ದಾನೆ.

ಹೂಡಿಕೆಗೆ ಒಪ್ಪಿದಾಗ ದೂರುದಾರ ಯುವಕನನ್ನು ತರಬೇತಿ ನೆಪದಲ್ಲಿ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿಕೊಂಡು ಕೆಲದಿನಗಳ ಕಾಲ ಟ್ರೇಡಿಂಗ್ ಕುರಿತು ಸಲಹೆ ಸೂಚನೆಗಳನ್ನು ಕೊಟ್ಟಿದ್ದ. ಇದಾದ ಮೇಲೆ ಹೂಡಿಕೆ ಮಾಡಲು ಶುರು ಮಾಡಿದ ಯುವಕನಿಗೆ ಒಂದೇ ತಿಂಗಳಲ್ಲಿ 1.07 ಲಕ್ಷ ರೂ. ಲಾಭ ಬಂದಿದೆ ಎಂದು ವಂಚಕರು ತೋರಿಸಿ ವಿಶ್ವಾಸ ಗಳಿಸಿದ್ದರು. ಲಾಭ ಕೈಸೇರಿದ ಕೂಡಲೇ ದುರಾಸೆಗೆ ಒಳಗಾದ ಯುವಕ, ವಂಚಕರು ಹೇಳಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹೂಡಿಕೆ ಮಾಡಿದ್ದ.

ಇತ್ತೀಚೆಗೆ ಲಾಭಾಂಶ ವಿತ್‌ಡ್ರಾ ಮಾಡಲು ಪ್ರಯತ್ನ ಮಾಡಿದಾಗ ಸಾಧ್ಯವಾಗಲಿಲ್ಲ. ಈ ಬಗ್ಗೆ ಅಪರಿಚಿತ ವ್ಯಕ್ತಿಗೆ ಕರೆ ಮಾಡಿ ವಿಚಾರಿಸಿದಾಗ ಸಬೂಬು ಹೇಳಿ ಮುಂದೂಡಿದ್ದ. ಕೊನೆಗೆ ಹೂಡಿಕೆ ಆ್ಯಪ್ ಸರ್ವರ್ ಡೌನ್ ಆಗಿದ್ದು, ನೊಂದ ಯುವಕ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾನೆ. ಆರೋಪಿಗಳ ವಿವರ ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದು ಸೈಬರ್ ಕ್ರೈಂ ಪೊಲೀಸರು ಮಾಹಿತಿ ನೀಡಿದ್ದಾರೆ.