ನ್ಯೂಸ್

ಉಮ್ಮತ್ತೂರು ಚೆಕ್‌ಪೋಸ್ಟ್‌ನಲ್ಲಿ 1.11ಲಕ್ಷ ರೂ.ವಶ

ಹುಣಸೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.11 ಲಕ್ಷ ರೂ.ಗಳನ್ನು ತಾಲೂಕಿನ ಉಮ್ಮತ್ತೂರು ಚೆಕ್‌ಪೋಸ್ಟ್ ಅಧಿಕಾರಿಗಳು ವಶಕ್ಕೆ ಪಡೆದರು.


ಮಂಗಳವಾರ ಸಂಜೆ ಗುರುಪುರದಿಂದ ಹುಣಸೂರಿಗೆ ತೆರಳುತ್ತಿದ್ದ ಆಪೇ ಗೂಡ್ಸ್ ಆಟೋವನ್ನು ಉಮ್ಮತ್ತೂರು ಚೆಕ್‌ಪೋಸ್ಟ್ ಅಧಿಕಾರಿ ಎಂ.ಎಂ.ಮಂಜುನಾಥ್ ಮತ್ತವರ ತಂಡ ತಡೆದು ಪರಿಶೀಲಿಸಿದಾಗ 1,11,960 ರೂ.ನಗದು ಪತ್ತೆಯಾಯಿತು. ಸೂಕ್ತ ದಾಖಲೆಗಳನ್ನು ನೀಡಲು ವಿಫಲರಾದ ಕಾರಣ ಹಣವನ್ನು ಸರ್ಕಾರಿ ಖಜಾನೆಗೆ ಜಮಾ ಮಾಡಲಾಯಿತು. ಹುಣಸೂರಿನ ಆರ್‌ಕೆ ಎಂಟರ್‌ಪ್ರೈಸಸ್‌ಗೆ ಸೇರಿದ ಹಣ ಇದಾಗಿದ್ದು, ವ್ಯಾನ್‌ನಲ್ಲಿ ಸಿಬ್ಬಂದಿ ಷರೀಫ್‌ರಿಂದ ಅಧಿಕಾರಿಗಳು ಹಣ ಪಡೆದರು. ಪರಿಶೀಲನೆ ವೇಳೆ ಚುನಾವಣಾ ಸಿಬ್ಬಂದಿ ಪ್ರಭಾಕರ್, ಫ್ಲೈಯಿಂಗ್ ಸ್ಕ್ವಾಡ್ ತಂಡದ ಅನಿಲ್‌ಕುಮಾರ್, ಪೊಲೀಸ್ ಸಿಬ್ಬಂದಿ ಮಂಜು, ಅರುಣ್ ಮತ್ತು ಫೋಟೋಗ್ರಾಫರ್ ಮಂಜು ಇದ್ದರು.


6 ಪ್ರಕರಣಗಳಲ್ಲಿ 35 ಲಕ್ಷ ರೂ.ವಶಕ್ಕೆ;
ಚುನಾವಣಾ ನೀತಿಸಂಹಿತೆ ಆರಂಭಗೊಂಡು 10 ದಿನಗಳೊಳಗೆ ತಾಲೂಕಿನ ನಾಲ್ಕು ಚೆಕ್‌ಪೋಸ್ಟ್‌ಗಳ ಪೈಕಿ ಉಮ್ಮತ್ತೂರು ಚೆಕ್‌ಪೋಸ್ಟ್‌ನಲ್ಲಿ ಮಾತ್ರ ನಗದು ಪತ್ತೆಯಾಗುತ್ತಿದೆ. ಈವರೆಗೆ ಈ ಚೆಕ್‌ಪೋಸ್ಟ್‌ನಲ್ಲಿ 6 ನಗದು ಪತ್ತೆ ಪ್ರಕರಣಗಳು ದಾಖಲಾಗಿದ್ದು, ಒಟ್ಟು 35,35,100 ರೂ.ಗಳನ್ನು ಚುನಾವಣಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಅತ್ಯಂತ ಹೆಚ್ಚು ವಾಹನಗಳು ಸಂಚರಿಸುವ ಹುಣಸೂರು-ಮೈಸೂರು ಮುಖ್ಯರಸ್ತೆಯ ಮನುಗನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಈವರೆಗೆ ಯಾವುದೇ ನಗದು ಹಣ ಪ್ರಕರಣ ದಾಖಲಾಗದಿರುವುದು ಸಾರ್ವಜನಿಕರಲ್ಲಿ ಅಚ್ಚರಿಗೆ ಮೂಡಿಸಿದೆ.


ಟ್ರಾಫಿಕ್ ಜಾಮ್ ಆಗುತ್ತದೆ ಎನ್ನುವ ಕಾರಣಕ್ಕೆ ಎಸ್‌ಎಸ್‌ಟಿ ಸಿಬ್ಬಂದಿ ಪರಿಶೀಲನಾ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮಡಿಕೇರಿ ಮತ್ತು ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ(275) ಇದಾಗಿದ್ದು, ಚುನಾವಣಾ ಸಿಬ್ಬಂದಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.